ಶ್ರೀಲಂಕಾದ ಪಾತಕಿಗಳಿಗೆ ಹಣದ ನೆರವು ನೀಡುತ್ತಿದ್ದ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಚೆನೈ ಮೂಲದ ಮನ್ಸೂರ್ ಮತ್ತು ಬೆಂಗಳೂರಿನ ವಿವೇಕ ನಗರದ ಅನ್ಬು ಬಂಧಿತ ಆರೋಪಿಗಳು. ಮನ್ಸೂರ್ ಬಳಿ 57 ಲಕ್ಷ ನಗದು,1.5 ಕೋಟಿ ಡಿ.ಡಿ ವಶಕ್ಕೆ ಪಡೆಯಲಾಗಿದೆ.ಬಂಧಿತ ಆರೋಪಿಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಅಗತ್ಯ ಖರ್ಚು ವೆಚ್ಚವೆಂದು ಸುಮಾರು 57 ಲಕ್ಷ ರೂ ಹೊಂದಿಸಿದ್ದ ಮನ್ಸೂರ್, ಕೆಲವೇ ದಿನಗಳಲ್ಲಿ ಆ ಹಣವನ್ನು ಆರೋಪಿಗಳಿಗೆ ತಲುಪಿಸಲು ಸಿದ್ದವಾಗಿದ್ದ.ಹಣ ಕೈ ಸೇರಿದ ಬಳಿಕ ಬೆಂಗಳೂರಿನಿಂದ ಇತರೆಡೆಗೆ ತೆರಳಲು ಆರೋಪಿಗಳು ಸಿದ್ಧರಾಗಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಆರೋಪಿಗಳು ಸಮುದ್ರ ಮಾರ್ಗ ಬಳಸಿ ಬೆಂಗಳೂರಿಗೆ ಬರಲು ನೆರವಾಗಿದ್ದ ಜಲಾಲ್ ನ ಮಾರ್ಗದರ್ಶನದಂತೆ ಮನ್ಸೂರ್ ಕೆಲಸ ನಿರ್ವಹಿಸುತ್ತಿದ್ದ. ಒಮಾನ್ ನಲ್ಲಿದ್ದ ಜಲಾಲ್, ಬೆಂಗಳೂರಿನಲ್ಲಿರುವ ಆರೋಪಿಗಳಿಗೆ 50 ಲಕ್ಷ ರೂ ನೀಡುವಂತೆ ಮನ್ಸೂರ್ ಗೆ ಸೂಚಿಸಿದ್ದ. ಅದರಂತೆ ಬೆಂಗಳೂರಿಗೆ ಬಂದಿಳಿದಿದ್ದ ಶ್ರೀಲಂಕಾ ಮೂಲದ ಆರೋಪಿಗಳಿಗೆ ಹಣ ನೀಡಲು ಮನ್ಸೂರ್ ಸಿದ್ಧವಾಗಿದ್ದ. ಇತ್ತ ಅನ್ಬು ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ಸಿದ್ಧಪಡಿಸಿ ಕೊಡುವ ಕೆಲಸಕ್ಕೆ ನಿಯೋಜನೆಯಾಗಿದ್ದ.ಅದಕ್ಕೆ ಬೇಕಾದ ದಾಖಲೆಗಳನ್ನ ಸಿದ್ಧಪಡಿಸುತ್ತಿದ್ದ ಆತನನ್ನ ಬಂಧಿಸಲಾಗಿದೆ.
ಶ್ರೀಲಂಕಾದಲ್ಲಿ ಕೊಲೆ, ಗ್ಯಾಂಗ್ ವಾರ್ ನಂತಹ ಕೃತ್ಯಗಳಲ್ಲಿ ಭಾಗಿಯಾಗಿ, ಬೆಂಗಳೂರಿಗೆ ಬಂದು ಅಕ್ರಮವಾಗಿ ನೆಲೆಸಿದ್ದ ಕಸನ್ ಕುಮಾರ್ ಸಂಕ (36), ಅಮಿಲಾ ನುವಾನ್ ಅಲಿಯಾಸ್ ಗೋತಾ ಸಿಲ್ವಾ (36) ರಂಗಪ್ರಸಾದ್ ಅಲಿಯಾಸ್ ಚುಟ್ಟಾ (36) ಹಾಗೂ ಆರೋಪಿಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಆಶ್ರಯ ನೀಡಿದ್ದ ಜೈ ಪರಮೇಶ್ (42) ಎಂಬಾತನನ್ನ ಗುರುವಾರ ಸಿಸಿಬಿ ಪೊಲೀಸರು ಬಂಧಿಸಿದ್ದರು.