ಶ್ರೀರಂಗಪಟ್ಟಣ-ಗುಡ್ಡೆಹೊಸೂರು; 4 ಪಥ ರಸ್ತೆ ನಿರ್ಮಾಣಕ್ಕೆ ಶೀಘ್ರ ಚಾಲನೆ: ಪ್ರತಾಪ್ ಸಿಂಹ
ಶನಿವಾರ, 5 ಫೆಬ್ರವರಿ 2022 (21:17 IST)
ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರು ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಮೇ ಅಥವಾ ಜೂನ್ ತಿಂಗಳಲ್ಲಿ ಚಾಲನೆ ದೊರೆಯಲಿದೆ ಎಂದು ಸಂಸದರಾದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಸುಮಾರು 4 ಸಾವಿರ ಕೋಟಿ ರೂ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ. ಎರಡುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೊಡಗು ಮತ್ತು ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಿದ್ದು, ಆ ನಿಟ್ಟಿನಲ್ಲಿ ರಸ್ತೆ, ಸಾರಿಗೆ ಸಂಪರ್ಕಕ್ಕೆ ಒತ್ತು ನೀಡಲಾಗಿದೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
ಶ್ರೀರಂಗಪಟ್ಟಣ ಬಳಿ ಡಿವಿಯೇಷನ್ ನೀಡಿ, ಶ್ರೀರಂಗಪಟ್ಟಣದಿಂದ ಪಿರಿಯಾಪಟ್ಟಣದ ವರೆಗೆ ಪ್ಯಾಕೇಜ್ 3 ಮತ್ತು ಪಿರಿಯಾಪಟ್ಟಣದಿಂದ ಗುಡ್ಡೆಹೊಸೂರು ವರೆಗೆ ಪ್ಯಾಕೇಜ್ 2 ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಂಸದರು ಹೇಳಿದರು.
ಈ ಯೋಜನೆಯು ದೊಡ್ಡ ಮೊತ್ತದ ಟೆಂಡರ್ ಕಾಮಗಾರಿ ಆಗಿರುವುದರಿಂದ 3 ತಿಂಗಳ ಕಾಲಾವಕಾಶ ಬೇಕಿದೆ. ರಸ್ತೆ ನಿರ್ಮಾಣ ಸಂಬಂಧ ಈಗಾಗಲೇ ಗುರ್ತಿಸಿರುವ ರಸ್ತೆ ಪಥದ ಮಾರ್ಗದಲ್ಲಿ ಭೂಮಿ ಸೇರಿದಂತೆ ಬೆಲೆ ಬಾಳುವ ಗಿಡ ಮರಗಳಿಗೆ ಬೆಲೆ ನಿಗದಿಮಾಡಿ ಪರಿಹಾರ ನೀಡಬೇಕಿದೆ. ಆ ನಿಟ್ಟಿನಲ್ಲಿ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಪ್ರತಾಪ್ ಸಿಂಹ ಅವರು ವಿವರಿಸಿದರು.
ನಾಲ್ಕು ಪಥ ರಸ್ತೆಯು ಹೆಚ್ಚಿನ ಕಾಮಗಾರಿಯು ಮೈಸೂರು ಜಿಲ್ಲೆ ವ್ಯಾಪ್ತಿಗೆ ಬರಲಿದೆ, ಕೊಡಗು ಜಿಲ್ಲೆಯಲ್ಲಿ ಸ್ವಲ್ಪ ಭಾಗ ಮಾತ್ರ ಬರಲಿದೆ. ಒಟ್ಟಾರೆ ಸುಸಜ್ಜಿತ ರಸ್ತೆ ನಿರ್ಮಾಣ ಆಗಲಿದೆ ಎಂದು ಕೊಡಗು-ಮೈಸೂರು ಲೋಕಸಭಾ ಸದಸ್ಯರು ಹೇಳಿದರು.
ಗ್ಯಾಸ್ ಪೈಪ್‍ಲೈನ್ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಾದ್ಯಾಂತ ನಲ್ಲಿ ನೀರು ಮಾದರಿಯಲ್ಲಿ ಪ್ರತಿಮನೆಗೂ ಗ್ಯಾಸ್ ಪೈಪ್‍ಲೈನ್ ಅಳವಡಿಸಬೇಕು ಎಂಬುದು ಅವರ ದೂರದೃಷ್ಟಿ ಆಗಿದೆ ಎಂದರು.
ಸದ್ಯ ರಾಜ್ಯದ 20 ನಗರಗಳಲ್ಲಿ ಗ್ಯಾಸ್ ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಗ್ಯಾಸ್ ಪೈಪ್‍ಲೈನ್ ಅನ್ನು ಹಂತ ಹಂತವಾಗಿ ಎಲ್ಲಾ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆ ಆಗಲಿದೆ ಎಂದು ಪ್ರತಾಪ್ ಸಿಂಹ ಅವರು ವಿವರಿಸಿದರು.
ರೈಲ್ವೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು ಕುಶಾಲನಗರದ ವರೆಗೆ ರೈಲು ನಿರ್ಮಾಣ ಕಾಮಗಾರಿ ಆಗಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ.50 ರಷ್ಟು ಹಣ ಭರಿಸಬೇಕಿದೆ. ಸುಮಾರು 1854 ಕೋಟಿ ರೂ ಅಂದಾಜು ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.
ಕೋವಿ ಹಕ್ಕು ಬಗ್ಗೆ ಮಾಹಿತಿ ನೀಡಿ ಕೊಡಗಿನವರಿಗೆ ಕೋವಿ ಹಕ್ಕು ಇರಲಿದೆ ಎಂದರು. ಹಾಗೆಯೇ ಹಿಜಾಬ್ ಬಗ್ಗೆ ಮಾತನಾಡಿ ಸಮಾನತೆ ಮತ್ತು ಭ್ರಾತೃತ್ವಕ್ಕೆ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರವನ್ನು ಎಲ್ಲರೂ ಪಾಲಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಸಂಸದರು ಹೇಳಿದರು.
ಬೆಂಗಳೂರು-ಮೈಸೂರು 10 ಫಥ ರಸ್ತೆಯು 9500 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಮುಂದಿನ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ. 6 ಪಥ ಎಕ್ಸ್‍ಪ್ರೆಸ್ ರಸ್ತೆ ಹೊಂದಿರುತ್ತದೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ನಗರಸಸಭಾ ಸದಸ್ಯರಾದ ಅಪ್ಪಣ್ಣ ಇದ್ದರು.