ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ

ಭಾನುವಾರ, 27 ಮಾರ್ಚ್ 2022 (19:42 IST)
ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ರಾಜ್ಯಾದ್ಯಂತ `ಎಸ್‌ಎಸ್‌ಎಲ್ ಸಿ' ಪರೀಕ್ಷೆ ಆರಂಭವಾಗಲಿದೆ. ಈ ಬಾರಿ 8,73,846 ವಿದ್ಯಾರ್ಥಿಗಳು ಎಸ್​ಎಸ್​​ಎಲ್​ಸಿ ಪರೀಕ್ಷೆ ಬರೆಯಲಿದ್ದಾರೆ.
 
ಈ ಬಾರಿ ರಾಜ್ಯದ 15,387 ಶಾಲೆಗಳ 8,73,846 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಪರೀಕ್ಷೆ ಬರೆಯಲು 45,289 ಪರೀಕ್ಷಾ ಕೊಠಡಿಗಳ ಸಿದ್ಧತೆ ಮಾಡಲಾಗಿದೆ.
 
3,444 ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಯಲಿದ್ದು, 49,817 ಕೊಠಡಿ ಮೇಲ್ವಿಚಾರಕರು ಭಾಗಿಯಾಗಲಿದ್ದಾರೆ.
 
ರಾಜ್ಯದಲ್ಲಿ ಒಟ್ಟು 8,73,846 ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲಿದ್ದು, ಈ ಪೈಕಿ 4,52,732 ಗಂಡು ಮಕ್ಕಳು ಹಾಗೂ 4,21,110 ಹೆಣ್ಣು ಮಕ್ಕಳಿದ್ದಾರೆ. 04 ಜನ ತೃತಿಯ ಲಿಂಗಿಗಳು ಈ ಬಾರಿ ಪರೀಕ್ಷೆ ಎದುರಿಸುತ್ತಿದ್ದಾರೆ.
 
ವಿದ್ಯಾರ್ಥಿಗಳಿಗೆ `KSRTC'ಯಿಂದ ಉಚಿತ ಪ್ರಯಾಣಕ್ಕೆ ಅವಕಾಶ
 
ಪ್ರಸಕ್ತ ಸಾಲಿನಲ್ಲಿ ಮಾರ್ಚ 28 ರಿಂದ ಎಪ್ರೀಲ್ 11 ವರೆಗೆ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ( SSLC Exam ) ನಡೆಯಲಿದೆ. ಈ ದಿನಾಂಕದಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯೋದಕ್ಕೆ ತೆರಳಲು, ಪರೀಕ್ಷೆ ಬರೆದು ಮನೆಗೆ ವಾಪಾಸ್ ಆಗೋದಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ( KSRTC Bus ) ಉಚಿತವಾಗಿ ಸಂಚರಿಸಲು ಅವಕಾಶ ನೀಡಿದೆ.
 
ಈ ಬಗ್ಗೆ ಕೆ ಎಸ್ ಆರ್ ಟಿ ಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಂದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಸಾರಿಗೆ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
 
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ
 
ದಿನಾಂಕ 28-03-2022 ರಿಂದ ದಿನಾಂಕ 11-04-2022ರವರೆಗೆ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಬರುವುದು ಕಡ್ಡಾಯವಾಗಿದೆ. ಒಂದು ವೇಳೆ ವಸ್ತ್ರ ಸಂಹಿತೆಯನ್ನು ಪಾಲಿಸದೇ ಇದ್ದರೇ ಪರೀಕ್ಷೆಗೆ ನೋ ಎಂಟ್ರಿ ಎಂಬುದಾಗಿ ಶಿಕ್ಷಣ ಇಲಾಖೆ ಖಡಕ್ ಆದೇಶದಲ್ಲಿ ತಿಳಿಸಿದೆ.
 
ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯು ದಿನಾಂಕ 28-03-2022ರಿಂದ ದಿನಾಂಕ 11-04-2022ರವರೆಗೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.
 
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸತಕ್ಕದ್ದು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸತಕ್ಕದ್ದು ಎಂದು ಆದೇಶಿಸಲಾಗಿದೆ. ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ರಿಟ್ ಅರ್ಜಿಯ ತೀರ್ಪಿನಲ್ಲಿಯೂ ಸರ್ಕಾರದ ಆದೇಶಗಳನ್ನು ಸಿಂಧುಗೊಳಿಸಿರುತ್ತದೆ ಎಂದಿದ್ದಾರೆ.
 
ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಿ, ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರದೊಂದಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.
 
ಪೋಷಕರ ಫೋನ್ ಗೆ ಬರಲಿದೆ ಪರೀಕ್ಷಾ ಕೊಠಡಿಯ ಮಾಹಿತಿ!
 
ಎಸ್‌ಎಸ್‌ಎಲ್ ಸಿ (SSLC) ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಎಸ್ ಎಸ್‌ಎಲ್ ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಕೊಠಡಿಯ ಮಾಹಿತಿಯನ್ನು ಮುಂಚಿತವಾಗಿಇ ಎಸ್‌ಎಂಎಸ್ (SMS) ಮೂಲಕ ತಿಳಿಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.
 
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಗುಂಪುಗೂಡುವುದನ್ನು ತಡೆಯುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವ ಸಲುವಾಗಿ ಮುಂಚಿತವಾಗಿ ವಿದ್ಯಾರ್ಥಿಗಳ ಪಾಲಕರ ಮೊಬೈಲ್ ಫೋನ್ ಗಳಿಗೆ ಎಸ್‌ಎಂಎಸ್ ಅಥವಾ ವಾಟ್ಸ್ ಆಯಪ್ ಮೂಲಕ ಕೊಠಡಿಯ ಮಾಹಿತಿ ರವಾನೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ