ಶಾಲಾ-ಕಾಲೇಜು ಆರಂಭ- ಜಿಲ್ಲಾಡಳಿತ ಮನವಿ

ಶನಿವಾರ, 12 ಫೆಬ್ರವರಿ 2022 (20:29 IST)
ಇದೇ ಫೆಬ್ರುವರಿ 14 ರಿಂದ 9 ಮತ್ತು 10 ನೇ ತರಗತಿ ಶಾಲೆ ಪ್ರಾರಂಭವಾಗಲಿದೆ. ಆದ್ದರಿಂದ ಶಾಲಾ-ಕಾಲೇಜುಗಳಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಸಹಕರಿಸುವಂತೆ ವಿವಿಧ ಧಾರ್ಮಿಕ ಮುಖಂಡರಲ್ಲಿ ಮನವಿ ಮಾಡಲಾಗಿದೆ. 
 
ಶಾಲಾ-ಕಾಲೇಜು ಆರಂಭ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಮತ್ತು ವಿವಿಧ ಧಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು. 
 
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವ ತನಕ, ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು, ಹಿಜಾಬ್ ಧರಿಸಿ ಪ್ರವೇಶಿಸುವಂತಿಲ್ಲ ಹಾಗೂ ಧಾರ್ಮಿಕ ಸಂಕೇತದ ಬಾವುಟಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದು, ಅದನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಿದರು. 
 
ಕಳೆದ ಎರಡು ವರ್ಷದಿಂದ ಕೋವಿಡ್ 19 ನಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗಿದೆ. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಮಕ್ಕಳ ಭವಿಷ್ಯ ಬಗ್ಗೆ ಯೋಚಿಸಬೇಕಿದೆ. ಆ ನಿಟ್ಟಿನಲ್ಲಿ ಯಾರೂ ಸಹ ಧರ್ಮ ಮತ್ತು ಸಂಸ್ಕøತಿ ಹೆಸರಿನಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಬಾರದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 
 
ತಾಲ್ಲೂಕು ಮಟ್ಟದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಪೋಷಕ ಸಭೆ ನಡೆಸಿ, ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಮಾಹಿತಿ ನಿಡಬೇಕು. ಹೈಕೋರ್ಟ್ ಮಧ್ಯಂತರ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು. ಕೊಡಗು ಜಿಲ್ಲೆಯಲ್ಲಿ ಸೌಹಾರ್ಧತೆ ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮನವಿ ಮಾಡಿದರು. 
 
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ. ನಿಯಮಗಳನ್ನು ಪಾಲಿಸಬೇಕು. ಆ ನಿಟ್ಟಿನಲ್ಲಿ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಮಾತನಾಡಿ ಹೈಕೋರ್ಟ್‍ನ ಮಧ್ಯಂತರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.  
 
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಹೈಕೋರ್ಟ್‍ನ ಮಧ್ಯಂತರ ಆದೇಶ ಪಾಲಿಸುವುದು ನಮ್ಮ ಧರ್ಮವಾಗಿದೆ. ಕಾನೂನನ್ನು ಗೌರವಿಸುತ್ತೇವೆ ಎಂದರು. 
ಕೆ.ಟಿ.ಬೇಬಿಮ್ಯಾಥ್ಯು ಅವರು ಕಾಲೇಜುಗಳಲ್ಲಿ ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಮಾಹಿತಿ ನೀಡುವಂತಾಗಬೇಕು. ವಿವಿಧ ಧಾರ್ಮಿಕ ಮುಖಂಡರು ಹಾಗೂ ಪೋಷಕ ಸಭೆ ನಡೆಸಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದಂತೆ ಎಚ್ಚರ ವಹಿಸಬೇಕು ಎಂದು ಅವರು ಸಲಹೆ ಮಾಡಿದರು. 
 
     ಪ್ರಮುಖರಾದ ಇಮ್ರಾನ್ ಅವರು ಹೈಕೋರ್ಟ್‍ನ ಮಧ್ಯಂತರ ಆದೇಶ ಪಾಲಿಸಲಾಗುವುದು. ಶಾಂತಿ ಸುವ್ಯವಸ್ಥೆಗೆ ಸಹಕರಿಸಲಾಗುವುದು ಎಂದರು. 
    ಡಿವೈಎಸ್‍ಪಿ ಜಯಕುಮಾರ್ ಅವರು ಹೈಕೋರ್ಟ್ ಆದೇಶ ಪಾಲನೆ ಸಂಬಂಧಿಸಿದಂತೆ ಶಾಲಾಭಿವೃದ್ಧಿ ಸಮಿತಿಯು ವಿದ್ಯಾರ್ಥಿಗಳು ಹಾಗೂ ಪೊಷಕರಿಗೆ ಮನವರಿಕೆ ಮಾಡಬೇಕು ಎಂದರು. 
 
    ಮುಖ್ಯೋಪಾದ್ಯರ ಜಿಲ್ಲಾ ಸಂಘದ ಅಧ್ಯಕ್ಷರಾದ ಮನೋಹರ್ ಅವರು ಶಾಲೆಗಳಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಿದ್ದರು. 
 
      ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ ಅವರು ಶಾಲಾಭಿವೃದ್ಧಿ ಮತ್ತು ಪೋಷಕರ ಸಭೆ ನಡೆಸಿ ಎಲ್ಲಾ ಶಾಲೆಗಳಿಗೆ ಮಾಹಿತಿ ನೀಡುತ್ತಿದ್ದಾರೆ. 
 
     ವಿಶ್ವ ಹಿಂದೂ ಪರಿಷತ್ತಿನ ಘಟಕದ ಅಧ್ಯಕ್ಷರಾದ ಕೃಷ್ಣ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಜಗತ್ ತಿಮ್ಮಯ್ಯ, ಕುಶಾಲನಗರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೀನಪ್ಪ, ಮುಖ್ಯೋಪಾಧ್ಯಾಯರಾದ ಗುರುರಾಜ್ ಅವರು ಹಲವು ಮಾಹಿತಿಗಳನ್ನು ಪಡೆದರು.   
 
    ಪೊಲೀಸ್ ಇನ್ಸ್ ಪೆಕ್ಟರ್ ಮೇದಪ್ಪ ಅವರು ಹೈಕಮಾಂಡ್ ಮಧ್ಯಂತರ ಆದೇಶವನ್ನು ಓದಿದರು. ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಶೈಲೇಂದ್ರ ಕು,ಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ನಾನಾ ಇಲಾಖೆ ಅಧಿಕಾರಿಗಳು, ವಿವಿಧ ಧಾರ್ಮಿಕ ಸಂಸ್ಥೆ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ