ಇರಾನ್ ಭದ್ರತಾ ಸಿಬ್ಬಂದಿಗಳಿಂದ ಬಂಧಿಸಲ್ಪಟ್ಟಿದ್ದ ಆರು ಜನ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರನ್ನು ಇರಾನ್ ನ್ಯಾಯಾಲಯ ಬಿಡುಗಡೆಗೊಳಿಸಿದೆ.
ದುಬೈ ನಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಮೂಲದ 18 ಜನ ಮೀನುಗಾರರನ್ನು ಸೀಮಾ ಉಲ್ಲಂಘನೆ, ನಿಷೇಧಿತ ಪ್ರದೇಶದಲ್ಲಿ ಟೈಗರ್ ಫಿಷ್ ಬೇಟೆ ಮಾಡಿದ ಹಿನ್ನೆಲೆಯಲ್ಲಿ ಬೋಟ್ ನೊಂದಿಗೆ ಇರಾನ್ ನೌಕಾಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಜುಲೈ 27 ರಂದು 11 ಜನ ಹಾಗೂ ಆಗಸ್ಟ್ 25 ರಂದು ಏಳು ಜನ ಗಡಿ ಉಲ್ಲಂಘಿಸಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ನಿಷೇಧಿತ ಪ್ರದೇಶದಲ್ಲಿ ಟೈಗರ್ ಫಿಷ್ ಹಿಡಿದು ಸೀಮೋಲ್ಲಂಘನೆ ಮಾಡಿದ್ದ ಆರು ಜನ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಭಟ್ಕಳದ ಮೀನುಗಾರರನ್ನು ಇರಾನ್ ಸರ್ಕಾರ ಜೈಲಿಗೆ ಕಳುಹಿಸಿತ್ತು.
ಉಳಿದ 12 ಜನರನ್ನು ಬೋಟಿನೊಳಗೆ ಇರಾನ್ ನೌಕಾಪಡೆ ಸಿಬ್ಬಂದಿ ಬಂಧಿಸಿದ್ದರು. 50 ದಿನದಿಂದ ಆರು ಜನರು ಜೈಲಿನಲ್ಲಿದ್ದರು. ಇರಾನ್ ನ್ಯಾಯಾಲಯ ಬಂಧಿತರನ್ನು ಬಂಧ ಮುಕ್ತಗೊಳಿಸಿ ಆದೇಶ ನೀಡಿದೆ. ಉಳಿದ ಮೀನುಗಾರರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಭಟ್ಕಳ, ಹೊನ್ನಾವರ ಮತ್ತು ಕುಮಟಾ ಮೂಲದ ಮೀನುಗಾರರು ದುಬೈನಲ್ಲಿ ಮೀನುಗಾರಿಕೆ ನಡೆಸಿ ಇರಾನ್ ನಲ್ಲಿ ಬಂಧನ ವಾಗಿರುವ ಕುರಿತು ಕುಟುಂಬಕ್ಕೂ ತಡವಾಗಿ ಮಾಹಿತಿ ದೊರೆತಿತ್ತು. ವಿಷಯ ತಿಳಿದ ತಕ್ಷಣದಲ್ಲಿ ಭಟ್ಕಳದ ತಂಜೀಮ್ ಸಂಘಟನೆ ಹಾಗೂ ಸ್ಥಳೀಯ ಮುಖಂಡರು ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಇರಾನ್ ಸರ್ಕಾರ ಮೊದಲ ಹಂತವಾಗಿ ಆರು ಜನರನ್ನು ಬಿಡುಗಡೆ ಗೊಳಿಸಿದೆ.