ಕ್ವಾರಿ ಮತ್ತು ಕ್ರಷರ್ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ
ಬುಧವಾರ, 4 ಜನವರಿ 2023 (19:11 IST)
ಕ್ವಾರಿ ಮತ್ತು ಕ್ರಷರ್ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಬಹು ರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ರಾಜ್ಯದ ಕಲ್ಲು ಗಣಿ ಉದ್ದಿಮೆದಾರರನ್ನು ಕಡೆಗಣಿಸುತ್ತಿದೆ. ಹತ್ತು ದಿನಗಳಿಂದ ಕಲ್ಲು ಗಣಿಗಾರಿಕೆಯನ್ನು ಬಂದ್ ಮಾಡಿ ನಡೆಸುತ್ತಿರುವ ಹೋರಾಟಕ್ಕೆ ಮನ್ನಣೆ ನೀಡುತ್ತಿಲ್ಲ. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಜ.8 ರಂದು ಬೆಂಗಳೂರು ಚಲೋ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಬೆಂಗಳೂರು ನಗರ ಜಿಲ್ಲಾ ಸ್ಟೋನ್ ಕ್ರಷರ್ಸ್ ಅಂಡ್ ಕ್ವಾರಿ ಓನರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ. ಸರ್ಕಾರ ಕಲ್ಲು ಗಣಿಗಾರಿಕೆ ಉದ್ದಿಮೆದಾರರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನದಲ್ಲಿ ತೊಡಗಿದೆ. ಕಲ್ಲು ಗಣಿಗಾರಿಕೆಗೆ ಬಹುರಾಷ್ಟ್ರೀಯ ಕಂಪೆನಿಗಳಿಗ ಅವಕಾಶ ಕಲ್ಪಿಸುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಹೀಗಾಗಿ ಶನಿವಾರದ ವರೆಗೆ ಬೇಡಿಕೆಗಳನ್ನು ಈಡೇರಿಸುವಂತೆ ಗಡುವು ನೀಡಲಾಗಿದೆ. ನಂತರ ಹೋರಾಟ ತೀವ್ರಗೊಳ್ಳಲಿದೆ. ಸರ್ಕಾರದ ಹಠಮಾರಿ ಧೋರಣೆಯಿಂದ ಜಾಗತಿಕ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಕಾಮಗಾರಿಗೂ ಸಹ ಪ್ರತಿಕೂಲ ಪರಿಣಾಮ ಬೀರಿದೆ. ಹೋರಾಟದ ಬಿಸಿ ಏರ್ ಶೋಗೂ ತಟ್ಟಿದ್ದು, ಬೇಡಿಕೆ ಈಡೇರುವ ತನಕ ಮುಷ್ಕರ ಸ್ಥಗಿತಗೊಳ್ಳುವುದಿಲ್ಲ . ಇನ್ನು ಕಳೆದ 10 ದಿನಗಳಿಂದ ಕ್ವಾರಿ ಮತ್ತು ಕ್ರಷರ್ ಗಳು ಬಂದ್ ಆಗಿದ್ದು, ಸರ್ಕಾರಿ ಮತ್ತು ಖಾಸಗಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ, ವಿವಿಧ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದ ಕೂಲಿಕಾರ್ಮಿಕರು, ಗಣಿ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಡಿಕೆ ಈಡೇರಿಸುವ ಮನಸ್ಥಿತಿಯನ್ನು ಸರ್ಕಾರ ತೋರುತ್ತಿಲ್ಲ. ಹೀಗಾಗಿ ರಾಜ್ಯದಾದ್ಯಂತ ಕೂಲಿ ಕಾರ್ಮಿಕರು, ಅವಲಂಬಿತರು, ಲಾರಿ ಚಾಲಕರು, ಮಾಲೀಕರು, ಕ್ರಷರ್ ಮಾಲೀಕರು ಬೆಂಗಳೂರಿಗೆ ಮುತ್ತಿಗೆ ಹಾಕುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.