ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಅಲ್ಪಸಂಖ್ಯಾತರ ಹೆಸರು ಕೇಳಿಬಂದರೆ ಪ್ರಕರಣ ಮುಚ್ಚಿ ಹಾಕಲು ಸರ್ಕಾರವೇ ಸೂಚಿಸಿದೆ ಎಂಬ ಗಂಭೀರ ಆರೋಪವನ್ನು ವಿಪಪಕ್ಷ ನಾಯಕ ಆರ್. ಅಶೋಕ್ ಮಾಡಿದ್ದಾರೆ.
ಇತ್ತೀಚೆಗೆ ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆದಿತ್ತು. ಈ ಪ್ರಕರಣದ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಂಕಿತ ಆರೋಪಿಯ ಚಹರೆ ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಆದರೆ ಘಟನೆಗೆ ಸಂಬಂಧಪಟ್ಟಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಇದಕ್ಕೆ ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇವೆರಡೂ ಪ್ರಕರಣದಲ್ಲಿ ಅಲ್ಪಸಂಖ್ಯಾತರ ಹೆಸರು ಕೇಳಿಬಂದರೆ ಪ್ರಕರಣ ಮುಚ್ಚಿ ಹಾಕಲು ರಾಜ್ಯದ ಕಾಂಗ್ರೆಸ್ ಸರ್ಕಾರವೇ ಪೊಲೀಸರಿಗೆ ಆದೇಶ ನೀಡಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಇದೆಲ್ಲಾ ನಮ್ಮ ಮನಸ್ಸಿಗೆ ಬೇಸರ ತಂದಿದೆ. ಒಂದು ವೇಳೆ ಈ ಆರೋಪ ಸಾಬೀತಾದರೆ ಸರ್ಕಾರ ವಿಸರ್ಜನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಹೀಗೇ ಆದರೆ ಕರ್ನಾಟಕದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮುಂದುವರಿಯುತ್ತದೆ. ನಾನೂ ಗೃಹಸಚಿವನಾಗಿದ್ದವನು. ಹಾಗಾಗಿ ನನಗೆ ಗೊತ್ತಿದೆ. ಪಾಕಿಸ್ತಾನ ಜಿಂದಾಬಾದ್ ಪ್ರಕರಣದಲ್ಲಿ ಎಫ್ಎಸ್ಎಲ್ ವರದಿ ಬಹಿರಂಗಗೊಳಿಸದಂತೆ ಗೃಹಸಚಿವರಿಗೆ ಒತ್ತಡವಿದೆ. ಅವರೇ ಪೊಲೀಸರಿಗೆ ರಿಪೋರ್ಟ್ ಬಂದೇ ಇಲ್ಲ ಎಂದು ಹೇಳಿ ಎಂದಿದ್ದಾರೆ. ಗೃಹಸಚಿವರು ಯಾರದ್ದೋ ಒತ್ತಡಕ್ಕೆ ಸಿಲುಕಿ ಈ ರೀತಿ ಮಾಡುತ್ತಿದ್ದಾರೆ ಎಂದು ಅಶೋಕ್ ಆಪಾದಿಸಿದ್ದಾರೆ.