ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲೇ ಗಬ್ಬು ನಾರುತ್ತಿದೆ ಹುಲ್ಲುಹಳ್ಳಿ ಕುಗ್ರಾಮ

ಮಂಗಳವಾರ, 13 ಜುಲೈ 2021 (09:41 IST)
ಆನೇಕಲ್: ಜನರನ್ನು ಇನ್ನಿಲ್ಲದೆ ಕಾಡುತ್ತಿದ್ದ ಕೊರೊನಾ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಆದ್ರೆ ಇಲ್ಲೊಂದು ಗ್ರಾಮದ ಜನರು ಕೊರೊನಾಗಿಂತ ಹೆಚ್ಚಾಗಿ ಮೂಲಭೂತ ಸೌಕರ್ಯದ ಕೊರತೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲದೆ ಅಲ್ಲಿನ ಜನ ಸರಿಯಾದ ಸವಲತ್ತುಗಳಿಗಾಗಿ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಹುಲ್ಲುಹಳ್ಳಿ ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಗೆ ಅಗುದಿ ದೂರದಲ್ಲೇ ಇದೆ.
ಬೆಂಗಳೂರು ಹೊರವಲಯ ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಸೇರುವ ಹುಲ್ಲುಹಳ್ಳಿ ಗ್ರಾಮದ ರಸ್ತೆಗಳಲ್ಲಿ ಗಿಂಡಗಂಟಿಗಳೇ ತುಂಬಿ ಹೋಗಿವೆ. ಸ್ವಚ್ಚತೆ ಇಲ್ಲದೆ ಚರಂಡಿಗಳು ಗಬ್ಬುನಾರುತ್ತಿವೆ. ಈ ಗ್ರಾಮ ಐಟಿಬಿಟಿ ಹಬ್ ಖ್ಯಾತಿಯ ಎಲೆಕ್ಟ್ರಾನಿಕ್ ಸಿಟಿಗೆ ಕೂಗಳತೆ ದೂರದಲ್ಲಿದ್ದರೂ ಸಹ ಇಂದಿಗೂ ಕುಗ್ರಾಮದಂತಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಜನಪ್ರತಿನಿಧಿಗಳ ಲಾಲಸೆಯೋ ತಿಳಿಯದು, ಆದರೆ ಇಂದಿಗೂ ಈ ಗ್ರಾಮದ ಜನ ಶುದ್ಧ ಕುಡಿಯುವ ನೀರಿಗೆ ಪರದಾಡಬೇಕಿದೆ. ಗ್ರಾಮದ ರಸ್ತೆ ಮತ್ತು ಇಕ್ಕೆಲಗಳಲ್ಲಿ ಪೊದೆಗಳು ಬೆಳೆದು ಕಾಡಿನಂತಿದೆ. ಚರಂಡಿಯಂತೂ ಸ್ವಚ್ಚತೆ ಇಲ್ಲದೆ ಗಬ್ಬುನಾರುತ್ತಿದೆ. ಕೊರೊನಾ ಸಂದರ್ಭದಲ್ಲಿ ಸ್ಯಾನಿಟರೈಸ್ ಸಹ ಗ್ರಾಮದ ಬೀದಿಗಳಿಗೆ ಮಾಡಿಸಿಲ್ಲ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂಬುದು ಗ್ರಾಮಸ್ಥರಾದ ಲಕ್ಷ್ಮೀ ಮೊದಲಾದವರ ಆರೋಪವಾಗಿದೆ.
ಇನ್ನು, ಗ್ರಾಮದ ಕೆರೆ ಸೇರಿದಂತೆ ಸುತ್ತಮುತ್ತಲಿನ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ಕೆರೆ, ಕುಂಟೆ ಸೇರಿದಂತೆ ಸುತ್ತಮುತ್ತಲಿನ ಜಲಮೂಲಗಳು ಕಲುಷಿತಗೊಂಡಿವೆ. ಇದರಿಂದ ಜಾನುವಾರುಗಳಿಗೆ ಕುಡಿಯಲು ಯೋಗ್ಯ ನೀರು ಸಹ ದೊರೆಯುತ್ತಿಲ್ಲ. ಜೊತೆಗೆ ಸೊಳ್ಳೆ ಮತ್ತು ನೊಣಗಳ ಕಾಟ ಹೇಳ ತೀರದಾಗಿದೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಗೆ ಸರಬರಾಜು ಮಾಡುವ ಕುಡಿಯುವ ನೀರು ಸರಿಯಾದ ನಿರ್ವಹಣೆ ಇಲ್ಲದೆ ಹುಳು ಹುಪ್ಪಟೆಗಳಿಂದ ಕೂಡಿದ್ದು, ಕುಡಿಯಲು ನೀರು ಯೋಗ್ಯವಾಗಿಲ್ಲ. ಕೂಡಲೇ ಪುರಾತನವಾದ ಓವರ್ ಹೆಡ್ ಟ್ಯಾಂಕ್ ತೆರವುಗೊಳಿಸಬೇಕು. ನೂತನವಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದು ಸ್ಥಳೀಯರಾದ ರಾಮಕ್ಕ ಒತ್ತಾಯಿಸಿದ್ದಾರೆ. ಒಟ್ನಲ್ಲಿ ಎಲ್ಲೆಡೆ ಕೊರೊನಾ ಹಾವಳಿ ಇದ್ದರೆ ಈ ಗ್ರಾಮದ ಜನಕ್ಕೆ ಕೊರೊನಾ ಜೊತೆಗೆ ಮೂಲಭೂತ ಸೌಕರ್ಯಗಳ ಕೊರತೆಯ ಚಿಂತೆಯಾಗಿದೆ. ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮಸ್ಥರಿಗೆ ಸೂಕ್ತ ಸೌಲಭ್ಯ ಒದಗಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ