ಶೀತ, ಕಣ್ಣಿನ ತುರಿಕೆ, ಗಂಟಲು ಕಿಚ್ಕಿಚ್.. ಅಲರ್ಜಿ ಸಮಸ್ಯೆಗೆ ಇಲ್ಲಿದೆ

ಶನಿವಾರ, 10 ಜುಲೈ 2021 (08:24 IST)
ಆರೋಗ್ಯ : ನಿಮಗೆ ಉಸಿರಾಟಕ್ಕೆ ಸಂಬಂಧಿಸಿದ ಅಲರ್ಜಿ ಇರಲಿ, ಬಿಡಲಿ ಆದರೆ ಒಂದು ಸಣ್ಣ ಎಡವಟ್ಟು ಸಹ ನಿಮ್ಮನ್ನು ಸಮಸ್ಯೆಗೆ ದೂಡಬಹುದು. ಮೂಗು ಸೋರುವುದು, ಕಣ್ಣಿನಲ್ಲಿ ತುರಿಕೆ, ನೀರು ಸಂಗ್ರಹವಾಗುವುದು, ಗಂಟಲಿನ ಕಿರಿಕಿರಿ ಇದೆಲ್ಲವೂ ಸಣ್ಣದಾದರೂ ಸಹಿಸಲು ಅಸಾಧ್ಯ. ಈ ಶೀತದ ವಾತಾವರಣದ ಜೊತೆಗೆ ನಿಮ್ಮ ಕೈಗಳು ಕೂಡ ನಿಮಗೆ ತೊಂದರೆಯನ್ನು ನೀಡಬಹುದು. ಈ ನಿಟ್ಟಿನಲ್ಲಿ ಅಲರ್ಜಿ ಆರಂಭವಾಗಿವುದಕ್ಕೂ ಮುನ್ನವೇ ನೀವು ಅಲರ್ಜಿಯಿಂದ ಮುಕ್ತರಾಗುವುದು ಉತ್ತಮ ಆಲೋಚನೆಯಲ್ಲವೇ? ಆಲಕ ನಿಮ್ಮ ಜೀವನವನ್ನು ಸುಲಭವಾಗಿಸಿಕೊಳ್ಳಬಹುದು. ಆದರೆ ಇದಕ್ಕೆ ನಿಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಅನಿವಾರ್ಯವಾಗುತ್ತದೆ. ಇದರೊಟ್ಟಿಗೆ ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಅದಕ್ಕೂ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು.



ಅಲರ್ಜಿಯಿಂದ ಮುಕ್ತರಾಗಲು ಈ ಕೆಳಗಿನ 6 ಅಂಶಗಳನ್ನು ಅನುಸರಿಸಿ
1. ಮನೆಯ ಪರದೆಯನ್ನು ಧೂಳಿನಿಂದ ಮುಕ್ತಗೊಳಿಸಿ
ನಿಮ್ಮ ಮನೆಯ ಬಾಗಿಲು, ಕಿಟಕಿಗಳಲ್ಲಿರುವ ಪರದೆಗಳು ನಿಮ್ಮ ಅಲರ್ಜಿಗೆ ಮೂಲ ಕಾರಣವಾಗಿರುತ್ತವೆ. ಈ ಪರದೆಗಳ ಮೇಲೆ ಕೂರುವ ಸಣ್ಣ ಧೂಳಿನ ಕಣಗಳು ಅಲರ್ಜಿಕ್ ರಿನಿಟಿಸ್ ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಪರದೆಗಳನ್ನು ಪ್ರತಿ ವಾರ ತೊಳೆಯುವ ಬದಲಿಗೆ 10 ದಿನಗಳಿಗೊಮ್ಮೆ ಆ ಧೂಳನ್ನು ಚೆನ್ನಾಗಿ ಒರೆಸಿ. ಅಲ್ಲದೇ ಋತುಮಾನ ಬದಲಾದಂತೆ ಗಾಳಿಯೂ ಹೊತ್ತು ತರುವ ಧೂಳಿನ ಕಣಗಳು, ಟಾಕ್ಸಿನ್ಸ್ ಮತ್ತು ಅಲರ್ಜಿ ಅಂಶಗಳಿಂದ ನಿಮ್ಮ ಮನೆಯನ್ನು ಕಾಪಾಡಿಕೊಳ್ಳಬಹುದು.
2. ನಿಯಮಿತವಾಗಿ ಬೆಡ್ ಶೀಟ್ ಸ್ವಚ್ಚಗೊಳಿಸಿ

ಪ್ರತಿವಾರ ನಿಮ್ಮ ಹಾಸಿಗೆಯ ಬೆಡ್ಶೀಟ್ಗಳನ್ನು ವಾಷಿಂಗ್ ಮೆಶಿನ್ಗೆ ಹಾಕುವ ಮೂಲಕ ಶುಭ್ರತೆ ಕಾಪಾಡಿಕೊಳ್ಳಿ. ಇದರಿಂದ ಅಲರ್ಜಿಯನ್ನು ದೂರವಿಡಬಹುದು. ತಿಂಗಳಾನುಗಟ್ಟಲೇ ಬೆಡ್ಶೀಟ್ ಶುಭ್ರಮಾಡದಿದ್ದರೆ, ಧೂಳಿನ ಕಣಗಳು ಸಂಗ್ರಹವಾಗುತ್ತವೆ. ನಿಮಗೆ ಅಲರ್ಜಿ ಇದ್ದರೆ ಈ ಸಣ್ಣ ಅಂಶ ಅದನ್ನು ವೃದ್ಧಿಸುತ್ತದೆ.
3. ನಿಮ್ಮ ಬಾತ್ರೂಂ ಸದಾಕಾಲ ಒಣಗಿರಲಿ
ಸಾಮಾನ್ಯವಾಗಿ ಬಾತ್ರೂಂ ಅಂದರೆ ತೇವಾಂಶದಿಂದ ಕೂಡಿರುತ್ತದೆ. ಇದು ಶಿಲೀಂಧ್ರದ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ. ಇವು ಅಲರ್ಜಿ ಉಂಟು ಮಾಡಲು ಕಾರಣವಾಗಬಹುದು ಜೊತೆಗೆ ಆಸ್ತಮ ಕಾಯಿಲೆಯನ್ನೂ ಹೊತ್ತು ತರಬಹುದು. ಈ ನಿಟ್ಟಿನಲ್ಲಿ ನಿಮ್ಮ ಸ್ನಾನದ ಗೃಹಗಳು ಸದಾ ಕಾಲ ಡ್ರೈ ಆಗಿರುವಂತೆ ನೋಡಿಕೊಳ್ಳಿ.
ನಿಮ್ಮ ಬಾತ್ರೂಂ ಕಿಟಕಿಗಳು ತೆಗೆದಿರಲಿ, ಗಾಳಿ, ಬೆಳಕು ಹದವಾಗಿರಲಿ. ಪ್ರತಿಬಾರಿ ಬಳಸುವ ಟವೆಲ್ ಅನ್ನು ಒಣಗಿಸಿ. ಹದಿನೈದು ದಿನಕ್ಕೊಮ್ಮೆ ನಿಮ್ಮ ಬಾಗಿಲ ಮ್ಯಾಟನ್ನು ತೊಳೆದು ಒಣಗಿಸಿ. ನೆಲವನ್ನು ಶುಭ್ರವಾಗಿಟ್ಟುಕೊಳ್ಳಿ.
4. ನಿಮ್ಮ ಅಡುಗೆ ಮನೆಯ ಗಾಳಿ, ಬೆಳಕು ಚೆನ್ನಾಗಿರಲಿ
ಅಡುಗೆ ಮನೆಯಲ್ಲಿರುವ ಎಗ್ಸಾಟ್ ಫ್ಯಾನ್ ಮತ್ತು ಚಿಮಣಿ ಬಗ್ಗೆಯೂ ಗಮನವಿರಲಿ. ಇದರ ಮೇಲ್ಮೈಯಲ್ಲಿ ಧೂಳು ಕೂರದಂತೆ ನೋಡಿಕೊಳ್ಳಿ. ಇದು ಅಲರ್ಜಿ ಮತ್ತು ಆಸ್ತಮಕ್ಕೆ ಕಾರಣವಾಗಬಹುದು. ಇನ್ನೂ ನಿಷ್ಕಾಸ ಫ್ಯಾನ್ ಅಡುಗೆ ಮಾಡುವ ಸಂದರ್ಭದಲ್ಲಿ ಎಲ್ಲಾ ಹೊಗೆಯನ್ನು ಹೀರಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ಮನೆಯ ಗಾಳಿ ವ್ಯವಸ್ಥೆಗೆ ಧಕ್ಕೆ ಬಾರದಂತೆ ಎಚ್ಚರವಹಿಸಿ.
5. ಪರಾಗದ ಅಲರ್ಜಿ
ಸಾಮಾನ್ಯವಾಗಿ ನೀವು ಗಮನಿಸಿರಬಹುದು. ಕೆಲವರಿಗೆ ಹೂವಿನ ಸಣ್ಣ ಕಣಗಳು, ಗಾಳಿಯಲ್ಲಿ ಬೆರೆತು ನಿರಂತರವಾಗಿ ಸೀನುವುದು ಸಾಮಾನ್ಯವಾಗಿರುತ್ತದೆ. ಇದನ್ನು ಪರಾಗದ ಅಲರ್ಜಿ ಎನ್ನಬಹುದು. ಆದ್ದರಿಂದ ನೀವು ಹೊರಗಡೆ ಓಡಾಡುವ ಸಂದರ್ಭದಲ್ಲಿ ಈ ರೀತಿ ಉಂಟಾಗುವ ಪರಾಗದ ಧೂಳಿನ ಕಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಬಸ್ಸು, ಕಾರುಗಳಲ್ಲಿ ಓಡಾಡುವಾಗ ಕಿಟಕಿಗಳನ್ನು ಭದ್ರವಾಗಿ ಮುಚ್ಚಿ. ಈ ರೀತಿ ಧೂಳಿನ ಕಣಗಳು, ಗಾಳಿ ಅಧಿಕವಾಗಿದ್ದಾಗ ಹೊರಗಡೆ ಓಡಾಡುವುದನ್ನು ನಿಯಂತ್ರಿಸಿ.
6. ಅತಿ ಮಾಲಿನ್ಯವಿದ್ದಾಗ ಮನೆಯಲ್ಲಿಯೇ ಇರಿ.
ವಾಯುಮಾಲಿನ್ಯ ಜಾಗತಿಕ ಸಮಸ್ಯೆಯಾಗಿ ಉಸಿರಾಟದ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಅದರಲ್ಲೂ ಪ್ರತಿ ಬಾರಿಯೂ ಂಕಿI ( ಏರ್ ಕ್ವಾಲಿಟಿ) 100 ದಾಟಿದಾಗ ಮಾಲಿನ್ಯದಿಂದ ಆಸ್ತಮಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಆದ್ದರಿಂದ (ಂಕಿI) ಗಾಳಿಯ ಗುಣಮಟ್ಟ ಕಡಿಮೆ ಇದ್ದಾಗ ಮನೆಯಲ್ಲಿರುವುದೇ ಹೆಚ್ಚು ಸೂಕ್ತ.
ಅಲರ್ಜಿಯಿಂದ ದೂರವಿರುವುದೇ ಅದರ ಮೊದಲ ಚಿಕಿತ್ಸೆ. ಅಲರ್ಜಿ ಆದಾಗ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಚಿಕಿತ್ಸೆ ದೊರಕದಿದ್ದರೆ, ಆಸ್ತಮಾ, ಸಿಓಡಿಪಿ ಮತ್ತು ಸ್ಲೀಪ್ ಆಪ್ನಿಯಾದಂತಹ ಸಮಸ್ಯೆಗೆ ಕಾರಣವಾಗಬಹುದು. ಜೊತೆಗೆ ಮೂಗಿನಲ್ಲಿ ನೀರು ಸೋರುವುದು, ಗಂಟಲು ಕಿರಿ ಕಿರಿ, ಪದೇ ಪದೇ ಸೀನುವುದು ಉಂಟಾದರೆ ವೈದ್ಯರನ್ನು ಭೇಟಿ ಮಾಡಿ. ಈ ಎಲ್ಲಾ ನಿಯಮಗಳನ್ನು ಅನುಸರಿಸುವ ಮೂಲಕ ಅಲರ್ಜಿಯಿಂದ ಮುಕ್ತರಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ