ಸಚಿವರಿಗೆ ಕನ್ನಡ ಬರಲ್ಲ ಎಂದು ನಕ್ಕ ವಿದ್ಯಾರ್ಥಿ: ಗರಂ ಆಗಿ ಕ್ರಮ ಕೈಗೊಳ್ಳಿ ಎಂದ ಸಚಿವ ಮಧು ಬಂಗಾರಪ್ಪ

Krishnaveni K

ಬುಧವಾರ, 20 ನವೆಂಬರ್ 2024 (14:27 IST)
ಬೆಂಗಳೂರು: ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ತಮಾಷೆ ಮಾಡಿದ ಘಟನೆ ನಡೆದಿದೆ. ಇದಕ್ಕೆ ಗರಂ ಆದ ಮಧು ಬಂಗಾರಪ್ಪ ವಿದ್ಯಾರ್ಥಿ ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳೊಂದಿಗೆ ನೀಟ್, ಜೆಇಇ, ಸಿಇಟಿ ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮವಿತ್ತು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳೊಂದಿಗೆ ಆನ್ ಲೈನ್ ನಲ್ಲಿ ಸಂವಾದ ನಡೆಸಿದ್ದಾರೆ.

ಈ ವೇಳೆ ಆನ್ ಲೈನ್ ನಲ್ಲಿದ್ದ ವಿದ್ಯಾರ್ಥಿಯೊಬ್ಬ ‘ಶಿಕ್ಷಣ ಸಚಿವರಿಗೆ ಕನ್ನಡ ಬರಲ್ವೋ’ ಎಂದು ಕಿರುಚಿದ್ದಾನೆ. ಇದು ಸಚಿವರಿಗೆ ಕಿವಿಗೆ ಬಿದ್ದಿದೆ. ಒಂದು ಕ್ಷಣ ಗಲಿಬಿಲಿಯಾದ ಅವರು, ಏಯ್ ಯಾರೋ ಅವ್ನು ಎಂದು ಪಕ್ಕದಲ್ಲಿದ್ದ ಅಧಿಕಾರಿಗಳಿಗೆ ಕೇಳಿದ್ದದ್ದಾರೆ. ‘ಏನು ನಾನು ಉರ್ದುವಿನಲ್ಲಿ ಮಾತಾಡ್ತಾ ಇದ್ದೀನಿ. ಟಿವಿಯವರು ಬೇರೆ ಇದನ್ನೇ ಹಾಕಿಕೊಂಡು ಹೊಡಿತಾ ಇರ್ತಾರೆ’ ಎಂದು ಪಕ್ಕದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ‘ಯಾರು ಅದು ಕನ್ನಡ ಬರಲ್ಲ ಎಂದು ಹೇಳಿದ್ದು. ಅದನ್ನು ರೆಕಾರ್ಡ್ ಮಾಡಿ, ಯಾರು ಹೇಳಿದ್ದು ಎಂದು ತಿಳಿದುಕೊಂಡು ಅವನ ಮೇಲೆ ಕ್ರಮ ಕೈಗೊಳ್ಳಿ. ನಾಚಿಕೆಯಾಗಬೇಕು, ಇದು ಸ್ಟುಪಿಡ್’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಮಧು ಬಂಗಾರಪ್ಪ ಹಲವು ಬಾರಿ ತಪ್ಪಾಗಿ ಕನ್ನಡ ಉಚ್ಚರಿಸಿದ್ದರು. ಅದೇ ಕಾರಣಕ್ಕೆ ಬಹುಶಃ ವಿದ್ಯಾರ್ಥಿ ಈ ರೀತಿ ಸಚಿವರ ಎದುರೇ ಕೂಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ