ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಬದಲಿಸಿಕೊಂಡ ವಿದ್ಯಾರ್ಥಿಗಳು
ಶನಿವಾರ, 6 ಜೂನ್ 2020 (13:53 IST)
ಈ ಜಿಲ್ಲೆಯ 407 ಮಕ್ಕಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆ ಬರೆಯಲಿ ಎಂಬ ಉದ್ದೇಶದಿಂದ ಮಾಸ್ಕ್ ತಯಾರಿಸಲು ಶಿಕ್ಷಣ ಇಲಾಖೆ ಹೊಲಿಗೆ ಶಿಕ್ಷಕರಿಗೆ ಸೂಚನೆ ನೀಡಿದ ಹಿನ್ನಲೆ ಹಾವೇರಿ ಜಿಲ್ಲೆಯ 60 ಹೊಲಿಗೆ ಶಿಕ್ಷಕರು ಬರೋಬ್ಬರಿ 8,500 ಕಾಟನ್ ಮಾಸ್ಕ್‌ಗಳನ್ನು ತಯಾರಿಸಿದ್ದಾರೆ.
ಹೀಗಂತ ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ. ದಾನಿಗಳಿಂದ ಸಂಗ್ರಹವಾದ ಹಣದಲ್ಲಿ ಬಟ್ಟೆ ಖರೀದಿಸಿ, ಶಿಕ್ಷಕರಿಗೆ ವಿತರಣೆ ಮಾಡಲಾಗಿತ್ತು. ಆ ಬಟ್ಟೆಯಿಂದ 60 ಶಿಕ್ಷಕರು ಮೇ 19ರಿಂದ ಇದುವರೆಗೆ ಒಟ್ಟು 8,500 ಮಾಸ್ಕ್ ಹೊಲಿದು ಇಲಾಖೆಗೆ ಹಸ್ತಾಂತರಿಸಿದ್ದಾರೆ. ಜತೆಗೆ ಜಿಲ್ಲೆಯ 11 ಸಂಘ–ಸಂಸ್ಥೆಗಳು ಒಟ್ಟು 55 ಸಾವಿರ ಮಾಸ್ಕ್‌ಗಳನ್ನು ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಉಚಿತವಾಗಿ ನೀಡಿದ್ದಾರೆ ಎಂದಿದ್ದಾರೆ.
ಜಿಲ್ಲೆಯಲ್ಲಿ 75 ಪರೀಕ್ಷಾ ಕೇಂದ್ರಗಳಿದ್ದು, 21,789 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 695 ಮಕ್ಕಳು ಹಾವೇರಿ ಜಿಲ್ಲೆಗೆ ಬೇರೆ ಕಡೆಯಿಂದ ವಲಸೆ ಬಂದಿದ್ದಾರೆ. ವಲಸೆ ಬಂದಿರುವ ಮಕ್ಕಳು ನಮ್ಮ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲಿದ್ದಾರೆ. ವಲಸೆ ಕಾರಣದಿಂದ 407 ಮಕ್ಕಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.