ಡಿ.ಕೆ. ಶಿವಕುಮಾರ್ ಗೆ ಸುಳ್ಯ ಕೋರ್ಟ್ ನಿಂದ ವಾರಂಟ್ ಜಾರಿ : ಏನಿದು ಪ್ರಕರಣ?

ಬುಧವಾರ, 15 ಸೆಪ್ಟಂಬರ್ 2021 (13:55 IST)
ಸುಳ್ಯ, ಸೆ. 15 : ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ಬೆಳ್ಳಾರೆಯ ಸಾಯಿ ಗಿರಿಧರ್ ಮತ್ತು ಇಂಧನ ಖಾತೆಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಡುವಿನ ಫೋನ್ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಹಾಜರಾಗದಿರುವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.

ಕೋರ್ಟ್ಗೆ ಹಾಜರಾಗದಿರುವು ದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್ ಅವರನ್ನು ಕೋರ್ಟ್ ಎದುರು ಹಾಜರುಪಡಿಸುವಂತೆ ಐಜಿಪಿ ಮತ್ತು ಡಿಐಜಿಗೆ ಕೂಡ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದಾರೆ. ಸೆ. 29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಪ್ರಕರಣದ ಹಿನ್ನೆಲೆ
ಸ್ಥಳೀಯವಾಗಿ ನಿರಂತರ ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯ ಬಗ್ಗೆ ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ಅವರು 2016ರ ಫೆಬ್ರವರಿ 28ರಂದು ರಾತ್ರಿ ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎನ್ನಲಾಗಿದೆ.
ಡಿಕೆಶಿ ಅವರು ತತ್ ಕ್ಷಣ ಮೆಸ್ಕಾಂ ಎಂಡಿ ಮೂಲಕ ಅಂದಿನ ಸುಳ್ಯ ಮೆಸ್ಕಾಂ ಪ್ರಭಾರ ಎಇಇ ಹರೀಶ್ ನಾೖಕ್ ಅವರಿಂದ ಸಾಯಿ ಗಿರಿಧರ ವಿರುದ್ಧ ಪೊಲೀಸರಿಗೆ ದೂರು ನೀಡಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾತ್ರಿಯೇ ಬೆಳ್ಳಾರೆಗೆ ಹೋಗಿ ರೈ ಅವರನ್ನು ಬಂಧಿಸಿದ್ದರು.
ಸುಳ್ಯ ಪೊಲೀಸರು ಗಿರಿಧರ ಅವರನ್ನು ಬಂಧಿಸಲೆಂದು ರವಿವಾರ ಮಧ್ಯರಾತ್ರಿ ಅವರ ಮನೆಗೆ ಹೋದಾಗ ಮನೆಯಲ್ಲಿ ರೈ ಜತೆ ತಾಯಿ, ಪತ್ನಿ, ಮಗಳು ಇದ್ದರು. ಪೊಲೀಸರ ಕ್ರಮದ ಬಗ್ಗೆ ಅವರು ಒಳಗಿನಿಂದಲೇ ಆಕ್ಷೇಪಿಸಿ ಬಾಗಿಲು ತೆರೆಯಲಿಲ್ಲ. ಅಷ್ಟಕ್ಕೇ ಬಿಡದ ಪೊಲೀಸರು ಮನೆಯ ಛಾವಣಿ ಏರಿ ಹೆಂಚುಗಳನ್ನು ಒಡೆದು ಮನೆಯೊಳಗೆ ಇಳಿದು ರೈ ಅವರನ್ನು ಬಂಧಿಸಿದ್ದರು. ಆ ವಿಚಾರ ಅಂದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಪ್ರಕರಣದಲ್ಲಿ ಶಿವಕುಮಾರ್ ಸಾಕ್ಷಿಯಾಗಿದ್ದು, ಸಾಕ್ಷ್ಯ ನುಡಿಯಲು ಹಾಜರಾಗುವಂತೆ ಸುಳ್ಯ ಕೋರ್ಟ್ 3 ಬಾರಿ ಸಮನ್ಸ್ ಮತ್ತು ಒಂದು ಬಾರಿ ವಾರಂಟ್ ಜಾರಿ ಮಾಡಿತ್ತು. ಆದರೂ ಡಿಕೆಶಿ ಹಾಜರಾಗಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ