ಕೆಆರ್ ಎಸ್ ಡ್ಯಾಂ ಸಣ್ಣಪುಟ್ಟ ಬಿರುಕು ಕಾಣಿಸಿಕೊಳ್ಳುತ್ತಿದ್ದು, ಇದರ ದುರಸ್ತಿಗಾಗಿ ಈಗಗಲೇ 67 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ನಾನು ಡ್ಯಾಂ ಸುರಕ್ಷತೆ ಬಗ್ಗೆ ಮಾತನಾಡಿದರೆ ರಾಜಕೀಯ ಮಾಡ್ತಾರೆ ಅಂತಾರೆ. ಈ ಬಗ್ಗೆ ಮಾತನಾಡೋದೇ ತಪ್ಪಾ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಬುಧವಾರ ಕೆಆರ್ ಎಸ್ ಡ್ಯಾಂ ವೀಕ್ಷಣೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಅಂದರೆ ಪಿಲ್ಲರ್ ನಲ್ಲಿ ಬಿರುಕು ಬಿಟ್ಟಿದೆ ಅಂತಲ್ಲ. ಡ್ಯಾಂನಲ್ಲಿ ಹಲವಾರು ಕಡೆ ಸಣ್ಣಪುಟ್ಟ ಬಿರುಕು ಕಾಣಿಸಿಕೊಳ್ಳುತ್ತಲೇ ಇದೆ. ಸೀಮೆಂಟ್ ಹಾಕಿ ತೇಪೆ ಹಚ್ಚುವ ಮೂಲಕ ಬಿರುಕು ಮುಚ್ಚಲಾಗಿದೆ ಎಂದರು.
ಅಕ್ರಮ ಗಣಿಗಾರಿಕೆಯಿಂದ ಈ ಬಿರುಕುಗಳು ಕಾಣಿಸಿಕೊಳ್ಳತಲೇ ಇದೆ. ಅಲ್ಲದೇ ಡ್ಯಾಂ ಸುತ್ತಮುತ್ತ ನಿರ್ದಿಷ್ಟ ದೂರದವರೆಗೆ ಗಣಿಗಾರಿಕೆ ಮಾಡುವಂತಿಲ್ಲ. ಅದು ಸಕ್ರಮವಾದರೂ ಸರಿ, ಅಕ್ರಮವಾದರೂ ಸರಿ. ಗಣಿಗಾರಿಕೆಯಿಂದ ಡ್ಯಾಂಗೆ ನಾಳೆ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದರು.