ಜೈಪುರ: ಇಲ್ಲಿನ ರಾಮ ಮಂದಿರಕ್ಕೆ ದಲಿತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಶಾಸಕ ಭೇಟಿ ನೀಡಿದ್ದಕ್ಕೆ ದೇವಾಲಯವನ್ನು ಶುದ್ಧೀಕರಣ ಮಾಡಿದ ಆರೋಪದಡಿಯಲ್ಲಿ ಮಾಜಿ ಶಾಸಕ ಜ್ಞಾನದೇವ್ ಅಹುಜಾ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ಭಕಾಂಗ್ರೆಸ್ ನಾಯಕ ಟಿಕರಾಮ್ ಜಲ್ಲಿ ಭೇಟಿ ನೀಡಿದ ಅಲ್ವಾರ್ ದೇವಾಲಯವನ್ನು "ಶುದ್ಧೀಕರಿಸಿದ" ಆರೋಪ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಬಿಜೆಪಿ ಈ ನಿರ್ಧಾರವನ್ನು ಕೈಗೊಂಡಿದೆ.
ದಲಿತ ಜನಾಂಗದವರಾದ ಜಲ್ಲಿ ರಾಮ ಮಂದಿರದಲ್ಲಿ ಪವಿತ್ರೀಕರಣ ಸಮಾರಂಭದಲ್ಲಿ ಭಾಗವಹಿಸಿದ ನಂತರ ಜ್ಞಾನದೇವ್ ಅಹುಜಾ ಅವರು ಗಂಗಾ ನೀರನ್ನು ಸಿಂಪಡಿಸಿ, ಶುದ್ಧೀಕರಿಸಿದ್ದರು. ಈ ಸಂಬಂಧ ಕಾಂಗ್ರೆಸ್‌ನವರು ಆಕ್ರೋಶ ಹೊರಹಾಕಿ ಉನ್ನತ ನಾಯಕತ್ವದಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಮೋದರ್ ಅಗರ್ವಾಲ್ ಮಂಗಳವಾರ ಅಹುಜಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಕೋರಿದರು.
"ಬಿಜೆಪಿ ರಾಜ್ಯ ಅಧ್ಯಕ್ಷರ ಸೂಚನೆಯಂತೆ, ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆರೋಪಗಳ ಕುರಿತು ಅಹುಜಾ ಯಾವುದೇ ಸ್ಪಷ್ಟೀಕರಣವನ್ನು ನೀಡಲು ಬಯಸಿದರೆ, ಅವರು ಮೂರು ದಿನಗಳಲ್ಲಿ ಹಾಗೆ ಮಾಡಬಹುದು, ನಂತರ ಅವರ ವಿರುದ್ಧ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.