ದೇವರ ಮೊಸಳೆ ನಿಧನ ..!!!

ಸೋಮವಾರ, 10 ಅಕ್ಟೋಬರ್ 2022 (14:28 IST)
ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ಇನ್ನಿಲ್ಲ. ಸುಮಾರು 75 ವರ್ಷದ ಬಬಿಯಾ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದು, ಭಕ್ತರು ಕಂಬನಿ ಮಿಡಿದಿದ್ದಾರೆ.
ಕುಂಬಳೆ ಸಮೀಪದ ನಾಯ್ಕಾಪು ಬಳಿಯ ಅನಂತಪುರ ದೇವಸ್ಥಾನದ ಪವಾಡ ಸದೃಶ ಮೊಸಳೆ ಬಬಿಯಾ ಸಸ್ಯಾಹಾರಿಯಾಗಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಯ ನಂತರ ಬಬಿಯಾಗೆ ಅನ್ನ ನೀಡಲಾಗುತ್ತಿತ್ತು. ಮೊಸಳೆಗೆ ನೈವೇದ್ಯ ಮಾಡುವುದು ಇಲ್ಲಿನ ಪ್ರಮುಖ ಸೇವೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬಬಿಯಾ ಬಳಿ ಪ್ರಾರ್ಥಿಸುತ್ತಿದ್ದರು. ಅರ್ಚಕರೇ ಪ್ರತಿನಿತ್ಯ ಬಬಿಯಾಗೆ ನೈವೇದ್ಯ ಅರ್ಪಿಸುತ್ತಿದ್ದರು. ಅರ್ಚಕರ ಕರೆಗೆ ಓಗೊಟ್ಟು ಬರುತ್ತಿದ್ದ ಮೊಸಳೆಯನ್ನು ಕಂಡು ಭಕ್ತರು ಬೆರಗಾಗುತ್ತಿದ್ದರು. ಇನ್ನು ಸರೋವರದ ಇತರ ಜೀವಿಗಳು ಮತ್ತು ಮೀನುಗಳಿಗೆ ಬಬಿಯಾ ಯಾವುದೇ ಹಾನಿ ಮಾಡುತ್ತಿರಲಿಲ್ಲ. ಮೊಸಳೆ ಬಬಿಯಾ ಸತ್ತಿದೆ ಎಂದು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿತ್ತು.
 
ಕುಂಬಳೆ ಸಮೀಪದ ಈ ದೇವಾಲಯವು ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಮೂಲ ಕ್ಷೇತ್ರ. ಭಾರತದ ಏಕೈಕ ಸರೋವರ ದೇವಾಲಯವೂ ಹೌದು. 1945ರಲ್ಲಿ ದೇವಸ್ಥಾನದಲ್ಲಿದ್ದ ಮೊಸಳೆಯನ್ನು ಬ್ರಿಟಿಷ್​ ಸೈನಿಕನೊಬ್ಬ ಗುಂಡಿಕ್ಕಿ ಕೊಂದಿದ್ದನಂತೆ. ಇದಾದ ಕೆಲ ದಿನಕ್ಕೆ ಮೊಸಳೆ ಬಬಿಯಾ ದೇವಾಲಯದ ಸರೋವರದಲ್ಲಿ ಮತ್ತೆ ಕಾಣಿಸಿಕೊಂಡಿತ್ತು ಎಂಬ ಪ್ರತೀತಿ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಬಬಿಯಾವನ್ನು ಪ್ರತ್ಯಕ್ಷ ದೇವ ಎಂದೇ ನಂಬಿ ಅದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಪ್ರಸಾದ ಸ್ವೀಕರಿಸುವಾಗ ಸರೋವರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಬಿಯಾವನ್ನ ನೋಡಲು ಜನಸಾಗರವೇ ಸೇರುತ್ತಿತ್ತು. ಇದೀಗ ಬಬಿಯಾ ಇನ್ನಿಲ್ಲಾ ಎಂಬ ಸುದ್ದಿ ಕೇಳಿ ಭಕ್ತರು ಆಘಾತಗೊಂಡಿದ್ದಾರೆ. ಸಾವಿರಾರು ಮಂದಿ ಬಬಿಯಾದ ಅಂತಿಮ ದರ್ಶನ ಪಡೆಯಲು ಅನಂತಪುರಕ್ಕೆ ಆಗಮಿಸಿದ್ದಾರೆ. ಪ್ರತ್ಯಕ್ಷ ದೇವರೆಂದೇ ಸ್ಥಳೀಯರು ನಂಬುತ್ತಿದ್ದ ಬಬಿಯಾ ಇನ್ನು ನೆನಪು ಮಾತ್ರ. ಸಕಲ ವೈದಿಕ ವಿಧಿಗಳೊಂದಿಗೆ ದಫನ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ