ಬಿಜೆಪಿ ಆಡಳಿತದಲ್ಲಿ ದೇಶ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ
ಶನಿವಾರ, 2 ಅಕ್ಟೋಬರ್ 2021 (22:02 IST)
ಬಿಜೆಪಿ ಆಡಳಿತದಲ್ಲಿ ದೇಶ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಪ್ರಸ್ತುತ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಾಂಧಿಯವರ ವಿಚಾರಧಾರೆಗಳು ನಮ್ಮ ಈ ಹೋರಾಟದ ಹಾದಿಗೆ ಬೆಳಕಾಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದರೂ, ಅವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡೋಣ. ಇದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.
ರಾಷ್ಟ್ರ ಕಂಡ ಅಪರೂಪದ ಹಾಗೂ ಧೀಮಂತ ವ್ಯಕ್ತಿತ್ವ ಮಹಾತ್ಮ ಗಾಂಧಿ ಅವರದು. ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ನಡೆಸುವಾಗಲೇ ಅಲ್ಲಿನ ಭಾರತೀಯರ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ, ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದರು. ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರು ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಲು ಮಹಾತ್ಮ ಗಾಂಧಿ ಅವರೇ ಸೂಕ್ತ ವ್ಯಕ್ತಿ ಎಂದು ಮನಗಂಡು ಅವರ ಮನವೊಲಿಸಿ ಭಾರತಕ್ಕೆ ಕರೆತಂದರು ಎಂದು ತಿಳಿಸಿದರು.
ಇಂದು ಗಾಂಧೀಜಿಯವರು ನಮ್ಮ ಜೊತೆ ಇಲ್ಲದಿದ್ದರೂ ಅವರ ತತ್ವಾದರ್ಶಗಳು, ವಿಚಾರಧಾರೆಗಳು ನಮ್ಮ ನಡುವೆ ಜೀವಂತವಾಗಿವೆ. ಇಂದಿಗೂ ಜಗತ್ತಿನ ಅನೇಕ ಜನ ಹೋರಾಟಗಾರರಿಗೆ ಮಹಾತ್ಮ ಗಾಂಧಿಯವರು ಸ್ಪೂರ್ತಿಯಾಗಿದ್ದಾರೆ ಎಂದರು.
ಗಾಂಧಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗ ತೋರಿದ್ದರೆ, ಭಾರತೀಯ ಜನತಾ ಪಕ್ಷ ಅಸತ್ಯ ಮತ್ತು ಹಿಂಸೆಯ ಹಾದಿಯಲ್ಲಿ ನಂಬಿಕೆ ಇಟ್ಟಿದೆ. ನರೇಂದ್ರ ಮೋದಿ ಅವರ ಮಾತು ಮತ್ತು ನಡೆ ಇವೆರಡು ತದ್ವಿರುದ್ಧವಾಗಿದೆ. ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಾರೆ. ಮೋದಿ ಅವರು ಯಾವುದನ್ನು ಉಳಿಸುತ್ತೇನೆ ಎನ್ನುತ್ತಾರೋ ಅದನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿಯವರು ದೇಶಭಕ್ತ ಎಂದು ಕರೆಯುತ್ತಾರೆ. ಇಂತಹ ಪಕ್ಷ ಅಧಿಕಾರದಲ್ಲಿ ಇದ್ದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಶಾಸ್ತ್ರಿ:
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಕರೆ ನೀಡಿದರು. ರೈಲು ದುರಂತ ಸಂಭವಿಸಿದಾಗ ಘಟನೆಯ ನೈತಿಕ ಹೊಣೆ ಹೊತ್ತು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಂದರೆ ತಪ್ಪಿಲ್ಲ. ಈಗಿನ ರಾಜಕಾರಣದಲ್ಲಿ ನೈತಿಕತೆ ಎಂಬುದು ಕಣ್ಮರೆಯಾಗಿದೆ ಎಂದರು.