ಆರ್ ಆರ್ ನಗರ ರಾಜಕಾಲುವೆ ಬಳಿ ಯುವಕನ ಶವ ಪತ್ತೆ

ಭಾನುವಾರ, 7 ನವೆಂಬರ್ 2021 (19:45 IST)
ಬೆಂಗಳೂರು: ಆರ್.ಆರ್ ನಗರ ರಾಜಕಾಲುವೆ ಬಳಿ ಯುವಕ ತರುಣ್ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತಿ ನಗರದ ಮುರುಗಪಿಳ್ಳೆ ಪಾಳ್ಯದ ನಿವಾಸಿ ತರುಣ್ ಕೊಲೆ ಮಾಡಿದ ಆರೋಪದ ಮೇಲೆ ಸಯೀದ್ ತಝಿಮುಲ್ಲಾ ಪಾಶ (39) ಮತ್ತು ಸೈಯದ್ ನಾಸೀರ್ (26) ಎನ್ನುವ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡಿದ್ದ ಯುವಕ ತರುಣ್ (21) ನ. 1ರ ಬೆಳಗ್ಗೆ ಪೋಷಕರ ಬಳಿ ಹಣ ತೆಗೆದುಕೊಂಡು ಪಟಾಕಿ ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದ. ರಾತ್ರಿಯಾದರೂ ಮನೆಗೆ ವಾಪಸ್ ಬರದ ಕಾರಣ ಕುಟುಂಬಸ್ಥರು ನಗರದ ಭಾರತಿ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ಆರೋಪಿಗಳಾದ ತಝಿಮುಲ್ಲಾ ನಾಸೀರ್, ಸೈಯದ್ ನಾಸೀರ್​ನು ತರುಣ್ ತಂದೆ ಮಣಿ ಬಳಿ ಕೆಲಸ ಮಾಡುತ್ತಿದ್ದರು. ದಿಢೀರ್ ಶ್ರೀಮಂತರಾಗುವ ಯೋಚನೆ ಇಬ್ಬರಲ್ಲೂ ಇತ್ತೀಚೆಗೆ ಮೊಳಕೆ ಒಡೆದಿತ್ತು. ತರುಣ್ ತಂದೆ ಮಣಿ ತಕ್ಕ ಮಟ್ಟಿಗೆ ಶ್ರೀಮಂತರಾಗಿದ್ದರಿಂದ ಅವರ ಮಗನನ್ನೇ ಅಪಹರಿಸಲು ಯೋಜನೆ ರೂಪಿಸಿದ್ದರು.‌ ನ. 1ರಂದು ಪಟಾಕಿ ಖರೀದಿಸಲು ಹೋಗಿದ್ದ ತರುಣ್​​ನನ್ನು ಹಿಂಬಾಲಿಸಿದ ಆರೋಪಿಗಳು ನಂತರ ಅವನ ಬಳಿ ಬಂದು ತಮ್ಮ ಅಕ್ಕನ ಮನೆಗೆ ಹೋಗೋಣ, ಅವರ ಮನೆಯ ಬಳಿಯೇ ಕಡಿಮೆ ಬೆಲೆಗೆ ಪಟಾಕಿ ಸಿಗುತ್ತವೆ ಎಂದು ಪುಸಲಾಯಿಸಿದ್ದರು. ನಂತರ ಅಕ್ಕನ ಮನೆಗೆ ತೆರಳಿ ತರುಣ್ ಜೊತೆ ಊಟ ಮಾಡಿದ್ದರು.
ಸ್ವಲ್ಪ ಸಮಯದ ಬಳಿಕ ತರುಣ್​ನ ಕೈಕಾಲು ಕಟ್ಟಿ ಹಾಕಿ, ಕಿರುಚಾಡಬಾರದೆಂದು ಮುಖಕ್ಕೆ ಪ್ಲಾಸ್ಟರ್ ಹಾಕಿದ್ದರು. ಆಗಲೂ ಕಿರುಚಾಡಲು ಪ್ರಯತ್ನಿಸಿದಾಗ ಕುತ್ತಿಗೆ ಹಿಸುಕಿದ್ದರು. ಬಾಯಿ ಮೂಗಿಗೂ ಸೇರಿಸಿ ಪ್ಲಾಸ್ಟರ್ ಹಾಕಿದ ಕಾರಣ ಉಸಿರಾಡಲು ಸಾಧ್ಯವಾಗದೇ ತರುಣ್ ಪ್ರಾಣ ಬಿಟ್ಟಿದ್ದ.
ಶವ ಎಸೆದು ಪರಾರಿ: ಹಣಕ್ಕಾಗಿ ಅಪಹರಣ ಮಾಡಿದ ಆರೋಪಿಗಳಿಗೆ ತರುಣ್​ನ ಸಾವು ಗಲಿಬಿಲಿ ಹುಟ್ಟಿಸಿತ್ತು. ಇಡೀ ರಾತ್ರಿ ಶವವನ್ನು ಮನೆಯಲ್ಲಿಟ್ಟುಕೊಂಡವರು ನಂತರ ಆಟೋದಲ್ಲಿ ಆರ್.ಆರ್. ನಗರ ವ್ಯಾಪ್ತಿಯಯಲ್ಲಿರುವ ವೃಷಭಾವತಿ ರಾಜಾಕಾಲುವೆ ಬಳಿ ತಂದಿದ್ದರು. ಶವದ ಮೂಟೆಯನ್ನು ಮೋರಿ ಬಳಿ ಬಿಸಾಕಿ ಅಲ್ಲಿಂದ ಪರಾರಿ  ಆಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ