ಕೊರೊನಾ ಸೋಂಕು ತಡೆಯಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದರೂ ಕೆಲವರು ಅನ್ಯಮಾರ್ಗಗಳಿಂದ ಜಿಲ್ಲೆಯ ಒಳಗಡೆ ಪ್ರವೇಶಿಸಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಇತ್ತೀಚೆಗೆ ತುಮಕೂರಿನ ಹುಳಿಯಾರಿನ ಎಚ್.ಅಶೋಕ ಎಂಬುವರು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ಕನಕವಳ್ಳಿಯಿಂದ ಪೊಲೀಸರ ಕಣ್ತಪ್ಪಿಸಿ ಬೆಳಗಾವಿಯ ನಿಪ್ಪಾಣಿಗೆ ಬಂದು, ಚೆಕ್‌ಪೋಸ್ಟ್ ಇದ್ದ ಕಾರಣಕ್ಕಾಗಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಬಂದು ಹುಳಿಯಾರಿನಿಂದ ಕಾರನ್ನು ತರಿಸಿಕೊಂಡು ಕೆಂಕೆರೆ ಕುದುರೆ ಕಣಿವೆಗೆ ಬಂದಿದ್ದಾರೆ. ಅಲ್ಲಿಗೆ ಕುಟುಂಬದ ಸದಸ್ಯ ಬಂದು ಕಾಡಿನ ದಾರಿಯಲ್ಲಿ ಹುಳಿಯಾರಿನ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಪಾಸ್ ಇಲ್ಲದೆ ಇದ್ದರೂ ಸ್ಥಳೀಯರೆಂದು ತೋಟಕ್ಕೆ ಹೋಗಿರುವುದಾಗಿ ಸುಳ್ಳು ಹೇಳಿ ಚೆಕ್‌ಪೋಸ್ಟ್‌ನಿಂದ ಬಂದಿದ್ದಾರೆ. ಈ ಮೂಲಕ ಕೆಂಪು ವಲಯದ ರಾಜ್ಯಗಳಿಂದ ಕರ್ನಾಟಕದ ಒಳಗೆ ಬಂದಾಗ ಪಾಲಿಸಬೇಕಾದ ನಿಯಮಗಳನ್ನು ಹಾಗೂ ಜಿಲ್ಲೆಯ ಗಡಿಗೆ ಬಂದಾಗ ಪಾಲಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಹಾಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅವರು ಸಂಚರಿಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕರೆತಂದ 4 ಜನರನ್ನು ತುಮಕೂರು ಸರ್ಕಾರಿ ಆಸ್ಪತ್ರೆಯ ನಿಗಾ ಘಟಕಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.