ಮೂವರು ಆರೋಪಿಗಳಾದ ನಯೀಮ್, ಮೋಹಿನ್, ವಸೀಮ್ ಎಂಬಾತನನ್ನು ಘಟನೆ ನಡೆದ 8 ಗಂಟೆಯೊಳಗೆ ಹೆಚ್ಎಎಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಲಿಖಿತ್ ಮತ್ತು ಅರೋಪಿಗಳು ಎಲ್ಲರೂ ಒಂದೇ ಏರಿಯಾದವರು. ಯುವಕರ ಗುಂಪುಗಳ ನಡುವೆ ಹಣ ಮತ್ತು ಯುವತಿಯ ವಿಚಾರವಾಗಿ ಗಲಾಟೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲಿಖಿತ್ ಈ ಮೊದಲು ಸಿದ್ದಿಕ್ ಎಂಬಾತನ ಬಳಿ ಸಾಲ ಪಡೆದಿದ್ದ. ಹಣ ವಾಪಸ್ ಕೇಳಿದಾಗ ಕೊಡದೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ಅಲ್ಲದೆ ಈ ಕುರಿತು ಮಾತನಾಡಲು ಆರೋಪಿಗಳಿಗೆ ಲಿಖಿತ್ ಕರೆ ಮಾಡಿದ್ದ. ಇದಕ್ಕೆ ಆರೋಪಿಗಳು ಕೂಡ ಒಪ್ಪಿದ್ದರು. ಮಾತುಕತೆಗೆ ಬರುವಾಗ ಲಿಖಿತ್ ಜತೆ ನವೀನ್ ಮತ್ತು ಕದಿರೇಶ್ ಎಂಬುವರು ಬಂದಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಲಿಖಿತ್ನನ್ನು ಡ್ರ್ಯಾಗರ್ನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ನಯೀಮ್ ಮತ್ತು ಲಿಖಿತ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಯುವತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಶುಕ್ರವಾರ ಸಂಜೆ 4 ಗಂಟೆಗೆ ಈ ವಿಚಾರದ ಕುರಿತು ಮಾತನಾಡಲು ನಯೀಮ್ ನನ್ನು ಹೆಚ್ಎಎಲ್ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಬರಲು ಲಿಖಿತ್ ಹೇಳಿದ್ದ. ಈ ವೇಳೆ ಯುವತಿ ವಿಚಾರವಾಗಿ ಇಬ್ಬರೂ ಮಾತುಕತೆ ಪ್ರಾರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು. ಬಳಿಕ ಡ್ರ್ಯಾಗರ್ನಿಂದ ಲಿಖಿತ್ಗೆ ಇರಿದು ಇಬ್ಬರು ಪರಾರಿಯಾಗಿದ್ದರು.