ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದ್ದ ನಾಲ್ಕು ಜನ ಸಹೋದರರ ಜಲಸಮಾಧಿ ಪ್ರಕರಣದಲ್ಲಿ ನಾಲ್ಕು ಶವಗಳು ಪತ್ತೆಯಾಗುವ ಮೂಲಕ ಇಂದು ಶೋಧ ಕಾರ್ಯ ಮುಕ್ತಾಯವಾಗಿದೆ.
ಊರಿನಲ್ಲಿ ಜಾತ್ರೆ ನಿಮಿತ್ಯ ಬಟ್ಟೆ ತೊಳೆಯಲು ಹೋದ ವೇಳೆ ತಮ್ಮ ಸೋದರನೊಬ್ಬ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ನೋಡಿ ಅವನನ್ನು ಉಳಿಸಲು ಹೋದ ಸಮಯದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ನಾಲ್ಕು ಜನ ಜಲಸಮಾಧಿ ಆಗಿದ್ದಾರೆ. ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ ಜಲಸಮಾಧಿ ಆಗಿದ್ದ ಪರಸಪ್ಪ ಬನಸೋಡೆ ನಿನ್ನೆ ಶವವಾಗಿ ಪತ್ತೆ ಆಗಿದ್ದರೆ ಇಂದು ಅವನ ಸಹೋದರರಾದ ಸದಾಶಿವ ಬನಸೋಡೆ, ಶಿವಾನಂದ ಬನಸೋಡೆ ಮತ್ತು ಧರೆಪ್ಪ ಬನಸೋಡೆ ಶವಗಳು ಕೃಷ್ಣಾ ನದಿಯಲ್ಲಿ ಪತ್ತೆಯಾಗಿವೆ.
ಎದೆ ಎತ್ತರ ಬೆಳೆದ ಮಕ್ಕಳು ಬದುಕಿಗೆ ಆಸರೆ ಆಗುತ್ತಾರೆ ಅಂದುಕೊಂಡಿದ್ದ ದಂಪತಿಗಳಾದ ಶರಣವ್ವ ಬನಸೋಡೆ ಮತ್ತು ಗೋಪಾಲ ಬನಸೋಡೆ ಇವರಿಗೆ ತಮ್ಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಬರಸಿಡಿಲು ಬಡಿದಂತಾಗಿದೆ.
ಇನ್ನೂ ಕಳೆದ ಎರಡು ದಿನಗಳ ಕಾಲ ಎನ್ ಡಿ ಆರ್ ಎಪ್, ಕೆ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಮೂಲಕ ಶೋಧ ಕಾರ್ಯ ಮುಂದುವರೆಸಿದ್ದು ಇಂದು ಮೂರು ಜನರ ಶವಗಳು ಪತ್ತೆಯಾಗುತ್ತಿದ್ದಂತೆಯೆ ಪ್ರತಿಭಟನೆಯೂ ನಡೆದ ಘಟನೆ ಜರುಗಿದೆ.
ನದಿಯಲ್ಲಿ ಮುಳುಗಿ ಮೃತಪಟ್ಟ ಸಹೋದರರ ಅವಲಂಬಿತರಿಗೆ ಪರಿಹಾರ ಘೋಷಣೆ ಆಗುವವರೆಗೂ ಶವಸಂಸ್ಕಾರ ನಡೆಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು ಹದಿನೈದು ದಿನಗಳ ಅವಧಿಯಲ್ಲಿ ಪರಿಹಾರ ಕೊಡುವ ಭರವೆಸಯನ್ನು ಅಥಣಿ ತಹಸೀಲ್ದಾರ ದುಂಡಪ್ಪ ಕೋಮಾರ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದು ಸ್ಥಳಕ್ಕೆ ಭೇಟಿ ನೀಡಿದ ಸಿ ಪಿ ಐ ಶಂಕರಗೌಡ ಬಸನಗೌಡರ ಮತ್ತು ಡಿವೈಎಸ್ ಪಿ ಎಸ್ ವಿ ಗಿರೀಶ್ ಜನರ ಮನವೊಲಿಸುವ ಮೂಲಕ ಮುಂದಿನ ಕಾರ್ಯಗಳಿಗೆ ಅನುವು ಮಾಡಿಕೊಟ್ಟಿದ್ದಾರೆ.
ಇನ್ನೂ ತಮ್ಮ ಮನೆಯ ಮಕ್ಕಳಲ್ಲಿ ಒಬ್ಬರಾದರೂ ಮರಳಿ ಬರುತ್ತಾರೆ ಅನ್ನುವ ನಂಬಿಕೆಯಲ್ಲಿ ಕಾಯುತ್ತ ಕುಳಿತ ಹಿರಿಯ ಜೀವ ಗಳಾದ ಗೋಪಾಲ ಬನಸೋಡೆ ಮತ್ತು ಶರಣವ್ವ ಬನಸೋಡೆ ದಂಪತಿಗಳ ನಿರೀಕ್ಷೆಯೂ ಕ್ಷಣಗಳು ಕಳೆದಂತೆಲ್ಲ ಹುಸಿಯಾದವು. ವಿಧಿಯ ಕ್ರೂರ ಆಟಕ್ಕೆ ಒಬ್ಬರು ಬದುಕಲಿಲ್ಲ ಕಣ್ಣೆದುರೆ ಕುಟುಂಬಕ್ಕೆ ಆಸರೆಯಾಗಿದ್ದ ಗಂಡಂದಿರನ್ನ ಕಳೆದುಕೊಂಡ ಪತ್ನಿಯರ ಆಕ್ರಂಧನ ಮುಗಿಲು ಮುಟ್ಟಿತ್ತು. ಹಿರಿಯ ಮಗ ಶಿವಾನಂದ ಬನಸುಡೆಗೆ ಇಬ್ಬರು ಮಕ್ಕಳಿದ್ದು ತಂದೆ ಕಣ್ಣೇದುರೆ ಜಲ ಸಮಾಧಿಯಾಗಿದ್ದು ಮಕ್ಕಳ ಭವಿಷ್ಯದ ಬಗ್ಗೆ ತಾಯಿ ಕಣ್ಣೀರು ಹಾಕುತ್ತಿದ್ದಾಳೆ.