ಮಗನಿಗೆ ವಯಸ್ಸಾಯಿತೆಂದು ಜಟಾ ಪಟ್ ಮದುವೆ ಮಾಡಿಸಿದ ತಂದೆ, ಮುಂದೇನಾಯ್ತು ನೋಡಿ

Sampriya

ಮಂಗಳವಾರ, 13 ಆಗಸ್ಟ್ 2024 (18:21 IST)
Photo Courtesy X
ತುಮಕೂರು: ಮದುವೆಯ ಸಂಬಂಧ ಬೆಳೆಸೋ ಸೋಗಿನಲ್ಲಿ ಮನೆಗೆ  ಬಂದು ಮದುವೆ ನಂತರ ಕೊಡುವ ವರದಕ್ಷಿಣೆ, ಒಡವೆಗಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ಗ್ಯಾಂಗ್‌ವೊಂದನ್ನು ಪೊಲೀಸರು ಬಂಧಿಸಿದ್ದಾರೆ.

ಈ ಗ್ಯಾಂಗ್‌ನ ಟಾರ್ಗೇಟ್ ವಯಸ್ಸು ಮೀರಿದ ಹೆಣ್ಣು ಮತ್ತು ಹುಡುಗನ ಕುಟುಂಬಗಳು. ಈ ಮಾಹಿತಿಯನ್ನು ಪಡೆದು ಹುಡುಗಿ ಅಥವಾ ಹುಡುಗನನ್ನು ಕರೆದುಕೊಂಡು ನಿಮ್ಮ ಮನೆಗಳಿಗೆ ಬರುವ ಗ್ಯಾಂಗ್‌ ವಧು- ವರನ ಪೋಷಕರು, ಚಿಕ್ಕಮ್ಮ, ಚಿಕ್ಕಪ್ಪ ಎಂದು ಪರಿಚಯಿಸಿಕೊಳ್ಳುತ್ತಾರೆ. ಸ್ಥಿತಿವಂತರಂತೆ ತೋರಿಸಿಕೊಳ್ಳುವ ಇವರು ಮದುವೆಯಾದ ನಂತರ ವರದಕ್ಷಿಣೆ, ಚಿನ್ನವನ್ನು ಎಗರಿಸಿ ಪರಾರಿಯಾಗುತ್ತಿದ್ದರು.

ಈ ಗ್ಯಾಂಗ್ ತುಮಕೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಹಲವು ಕಡೆ ಈ ರೀತಿ ಪಂಗನಾಮ ಹಾಕಿರುವುದು ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದ ನಿವಾಸಿ ಪಾಲಾಕ್ಷ ಎಂಬುವರು ತಮ್ಮ ಮಗ ದಯಾನಂದ ಮೂರ್ತಿ ಅವರಿಗೆ ಹೆಣ್ಣು ಹುಡುಕಲು ಹರಸಾಹಸ ಪಟ್ಟಿದ್ದಾರೆ. ಹತ್ತಾರು ಹೆಣ್ಣು ಹುಡುಕಿದರೂ ಕಂಕಣ ಭಾಗ್ಯ ಕೂಡಿ ಬರಲಿಲ್ಲ. ಕೊನೆಗೆ ಇವರಿಗೆ  ಕುಷ್ಟಗಿ ಮೂಲದ ಬಸವರಾಜು ಮೂಲಕ ಬ್ರೋಕರ್ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಕೇಳಿಕೊಂಡಿದ್ದರು.

ಪಾಲಾಕ್ಷರ ಅವರ ಹಿನ್ನೆಲೆ ತಿಳಿದ ಲಕ್ಷ್ಮೀ ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ ನೀವೆ ಮದುವೆ ಮಾಡಬೇಕೆಂದು ಬೊಗಳೆ ಬಿಟ್ಟಿದ್ದಾಳೆ. ಅದಲ್ಲದೆ ಆಕೆಯ ಬಳಿಯಿದ್ದ ಫೋಟೋವೊಂದನ್ನು ತೋರಿಸಿದ್ದಾಳೆ. ಹುಡುಗಿ ಇಷ್ಟವಾದರೆ ಆಕೆಯ ಚಿಕ್ಕಮ್ಮ ಚಿಕ್ಕಪ್ಪನೊಂದಿಗೆ ಮನೆಗೆ ಬರುತ್ತೇನೆ ಎಂದಿದ್ದಾಳೆ.

ನಕಲಿ ಚಿಕ್ಕಮ್ಮ ಚಿಕ್ಕಪ್ಪರನ್ನು ಸೃಷ್ಟಿ ಮಾಡಿಕೊಂಡು ಗಂಡು ನೋಡಲು ಬಂದಿದ್ದಾರೆ. ಅದೇ ದಿನವೇ ಮದುವೆ ಪ್ರಸ್ತಾಪ ಮಾಡಿ, ಹಿಂದೂ ಮುಂದು ಯೋಚನೆ ಮಾಡದೆ ಮದುವೆಯಾಗಿದ್ದಾರೆ.

ಮದುವೆಯಾದ ಎರಡು ದಿನದ ನಂತರ ಶಾಸ್ತ್ರಕ್ಕಾಗಿ ಹೆಣ್ಣನ್ನು ಊರಿಗೆ ಕರೆದುಕೊಂಡು ಹೋಗುತ್ತೇವೆಂದ ಲಕ್ಷ್ಮೀ  ಹಣ-ಚಿನ್ನದ ಒಡವೆ ಸಹಿತ ಹೋಗಿದ್ದಾರೆ. ರ ಕಳೆದರೂ ಮದುವೆಯಾದ ಮಧುಮಗಳು ಬಂದಿರಲಿಲ್ಲ. ಲಕ್ಷ್ಮೀಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು.ಪಾಲಾಕ್ಷ ಅವರು ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ನಂತರ  ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ