ವಚನ ತಿರುಚಿದ ಆರೋಪ: ಸುಪ್ರೀಂಕೋರ್ಟ್ ನಲ್ಲಿ ಮಾತೆ ಮಹಾದೇವಿಗೆ ಭಾರೀ ಹಿನ್ನಡೆ
ಬುಧವಾರ, 20 ಸೆಪ್ಟಂಬರ್ 2017 (21:24 IST)
ಬೆಂಗಳೂರು: ವಿವಾದಿತ ಪುಸ್ತಕ `ಬಸವ ವಚನ ದೀಪ್ತಿ’ಗೆ ಸಂಬಂಧಿಸಿದಂತೆ ಮಾತೆ ಮಹಾದೇವಿಗೆ ಭಾರೀ ಹಿನ್ನಡೆಯಾಗಿದೆ. ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
1998ರಲ್ಲಿ `ಬಸವ ವಚನ ದೀಪ್ತಿ’ ಪುಸ್ತಕವನ್ನು ಅಂದಿನ ರಾಜ್ಯ ಸರ್ಕಾರ ನಿಷೇಧಿಸಿತ್ತು. ಈ ಪುಸ್ತಕದಲ್ಲಿ ಮಾತೆ ಮಹಾದೇವಿ ಬಸವಣ್ಣನವರ ವಚನಗಳನ್ನು ತಿರುಚಿದ್ದ ಆರೋಪ ಹೊತ್ತಿದ್ದರು. ಇದರಲ್ಲಿ ಮಾತೆ ಮಹಾದೇವಿ ವಚನಗಳಲ್ಲಿ ಕೂಡಲಸಂಗಮ ದೇವ ಬದಲು ಲಿಂಗದೇವ ಎಂಬ ಅಂಕಿತನಾಮ ಬದಲಿಸಿದ್ದರು. ಈ ಪುಸ್ತಕವನ್ನು ವಿರಶೈವ ಮಹಾಸಭಾ ಸಹ ವಿರೋಧಿಸಿತ್ತು.
ಇದೇ ಸಂದರ್ಭದಲ್ಲಿ ಪುಸ್ತಕ ನಿಷೇಧ ಕ್ರಮ ಸರಿಯಲ್ಲ ಎಂದು ಮಾತೆ ಮಹಾದೇವಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ರಾಜ್ಯ ಸರ್ಕಾರದ ನಿಷೇಧ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾತೆ ಮಹಾದೇವಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಎಸ್.ಎ.ಬೋಬಡೆ, ನ್ಯಾ. ಎಲ್.ನಾಗೇಶ್ವರ್ ರಾವ್ ಅವರಿದ್ದ ಪೀಠ ಮಾತೆ ಮಹಾದೇವಿ ಅರ್ಜಿಯನ್ನು ವಜಾ ಮಾಡಿದೆ.