ಚುನಾವಣೆ ನಡೆಸಲಿಕ್ಕಾಗದಷ್ಟು ಸರ್ಕಾರ ಅಸಮರ್ಥವಾಗಿದೆಯೇ ಎಂದು ಪ್ರಶ್ನ- ಹೈಕೋರ್ಟ್
ಬುಧವಾರ, 17 ನವೆಂಬರ್ 2021 (21:57 IST)
ಬೆಂಗಳೂರು: ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಅಸಮರ್ಥವಾಗಿದೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ಅವಧಿ ಮುಗಿದಿರುವ ರಾಜ್ಯದ 56 ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ 30 ರೊಳಗೆ ಚುನಾವಣೆ ನಡೆಸುವಂತೆ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಆದೇಶ ನೀಡಲಾಗಿದೆ.
ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಸರ್ಕಾರ ಮತ್ತು ಆಯೋಗದ ಪರ ವಕೀಲರ ವಾದ ಆಲಿಸಿದ ಪೀಠ, ನ.26ರೊಳಗೆ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಅಧಿಸೂಚನೆ ಹೊರಡಿಸಬೇಕು. ಹಿಂದಿನಿಂದಲೇ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಬೇಕು. ಒಟ್ಟಾರೆ ಡಿಸೆಂಬರ್ 30 ರೊಳಗೆ ಚುನಾವಣೆ ನಡೆಸಬೇಕು ಎಂದು ನಿರ್ದೇಶಿಸಿತು.
ಇದಕ್ಕೂ ಮುನ್ನ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಪ್ರಮಾಣಪತ್ರವನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ನ್ಯಾಯಾಲಯಕ್ಕೆ ಸಲ್ಲಿಸಿ, ಚುನಾವಣೆಗೆ ಸಂಬಂಧ ಕೈಗೊಂಡಿರುವ ಮಾಹಿತಿಯನ್ನು ವಿವರಿಸಿದರು.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದಿಸಿ, ಬಾಕಿ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾರರ ಪಟ್ಟಿ ಅಂತಿಮವಾಗಿದೆ. ಸರ್ಕಾರ ಮೀಸಲು ಪಟ್ಟಿ ಪ್ರಕಟಿಸಿದರೆ ಚುನಾವಣೆ ನಡೆಸಬಹುದು ಎಂದರು.
ಇದೇ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ, ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳ ಅವಧಿ 2018ರಲ್ಲಿ ಮುಗಿದಿದೆ. ಕಳೆದ ಜುಲೈನಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಮೀಸಲಿಡುವ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಸರ್ಕಾರದಿಂದ ಮೀಸಲು ಅಂತಿಮಗೊಳಿಸಿರುವುದು ಎಷ್ಟರಮಟ್ಟಿಗೆ. ಸರ್ಕಾರ ಕಾಲಮಿತಿಯಲ್ಲಿ ಚುನಾವಣೆ ನಡೆಸಲು ಆಗದಷ್ಟು ಅಸಮರ್ಥವಾಗಿದೆಯೇ? ಚುನಾವಣೆ ನಡೆಸುವಂತೆ ನ್ಯಾಯಾಲಯ ಹೇಳಬೇಕೇ? ಎಂದು ಸರ್ಕಾರವನ್ನು ಕಟುವಾಗಿ ಟೀಕಿಸಿತು.