ಈ ವರ್ಷದಲ್ಲಿ ದೇಶವನ್ನು ಬೆಚ್ಚಿಬೀಳಿಸಿದ ಭೀಕರ ಕ್ರೈಂಗಳ ಮೆಲುಕು
ಶನಿವಾರ, 25 ಡಿಸೆಂಬರ್ 2021 (20:10 IST)
ಜಾರ್ಖಂಡ್ನ ಧನಬಾದ್ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ADJ) ಉತ್ತಮ್ ಆನಂದ್ (49) ಮುಂಜಾನೆ ಜಾಗಿಂಗ್ ಹೋಗಿದ್ದಾಗ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದಿತ್ತು. ಅದನ್ನು ಮೊದಲು ಅಪಘಾತ ಎಂದುಕೊಳ್ಳಲಾಗಿದ್ದರೂ, ಸಿಸಿಟಿವಿ ಫೂಟೇಜ್ ನೋಡಿದಾಗ ಅದೊಂದು ಕೊಲೆ ಎಂಬುದು ದೃಢಪಟ್ಟಿತ್ತು.ಇನ್ನೇನು 8 ದಿನಗಳಲ್ಲಿ 2021ನೇ ಇಸ್ವಿ ಮುಕ್ತಾಯ (Year Ender 2021)ಗೊಂಡು 2022ನೇ ಇಸ್ವಿ ಶುರುವಾಗುತ್ತದೆ. ಹಿಂದಿನ 2020 ಮತ್ತು 2021 ಸಂಪೂರ್ಣವಾಗಿ ಕೊವಿಡ್ 19 ವೈರಸ್ನಲ್ಲಿಯೇ ಕಳೆಯಿತು. 2020ಕ್ಕೆ ಹೋಲಿಸಿದರೆ, 2021 ಸ್ವಲ್ಪ ಉತ್ತಮವಾಗಿತ್ತು ಎಂದು ಹೇಳಬಹುದಾದರೂ ಕೊರೊನಾ ಹರಡುವಿಕೆ ಬಾಧಿಸುತ್ತಲೇ ಇದೆ. ಆದರೆ ಈ ಮಧ್ಯೆ 2021ರಲ್ಲಿ ದೇಶವನ್ನೇ ನಡುಗಿಸುವಂಥ ಒಂದಷ್ಟು ಕ್ರೈಂಗಳು ನಡೆದುಹೋಗಿವೆ. ಅಂಥ ಭಯಾನಕ ಅಪರಾಧ ಸುದ್ದಿಗಳ ಮೆಲುಕು ಇಲ್ಲಿದೆ..
ಮುಂಬೈ ಸಾಕಿನಾಕಾ ಅತ್ಯಾಚಾರ ಪ್ರಕರಣ
2021ರಲ್ಲಿ ನಡೆದ ಭಯಾನಕ ಕ್ರೈಂಗಳಲ್ಲಿ ಇದೂ ಒಂದು. ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಸೆಪ್ಟೆಂಬರ್ 10ರಂದು 30 ವರ್ಷದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅಮಾನುಷವಾಗಿ ರೇಪ್ ಮಾಡಿದ್ದ. ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿ, ಕ್ರೂರವಾಗಿ ವರ್ತಿಸಿದ್ದ. ಇದು 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರವನ್ನು ನೆನಪಿಸುವಂಥ ದುರ್ಘಟನೆಯಾಗಿತ್ತು. ಸಂತ್ರಸ್ತ ಮಹಿಳೆ ರಾಜವಾಡಿ ಆಸ್ಪತ್ರೆಯಲ್ಲಿ ಸುಮಾರು 33 ತಾಸು ಜೀವನ್ಮರಣ ಹೋರಾಟ ನಡೆಸಿ, ಕೊನೆಯುಸಿರೆಳೆದಿದ್ದರು. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಘಟನೆ ನಡೆದ 18 ದಿನಗಳ ಬಳಿಕ ಮುಂಬೈ ಪೊಲೀಸರು ಅತ್ಯಾಚಾರ ಆರೋಪಿ ವಿರುದ್ಧ 345 ಪುಟಗಳ ಚಾರ್ಜ್ಶೀಟ್ನ್ನು ಡಿಂಡೋಶಿ ಸೆಷನ್ಸ್ ಕೋರ್ಟ್ನಲ್ಲಿ ಸಲ್ಲಿಸಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಅತ್ಯಾಚಾರ ಆರೋಪಿಯ ಕ್ರೌರ್ಯಕ್ಕೆ ದೇಶದ ಜನರು ನಲುಗಿದ್ದರು. ವ್ಯಾಪಕ ಪ್ರತಿಭಟನೆಗಳೂ ನಡೆದಿದ್ದವು.ವಿಸ್ಮಯಾ ವರದಕ್ಷಿಣೆ, ಆತ್ಮಹತ್ಯೆ ಪ್ರಕರಣ
2021ನೇ ಇಸ್ವಿಯಲ್ಲೂ ಭಾರತವನ್ನು ವರದಕ್ಷಿಣೆ ಎಂಬ ಪಿಡುಗು ಬಿಟ್ಟಿಲ್ಲ. ಅದರಲ್ಲೂ ಒಂದು ಶಿಕ್ಷಣವಂತ ಹೆಣ್ಣುಮಗಳು ಈ ವರದಕ್ಷಿಣೆಯೆಂಬ ಅನಿಷ್ಠಕ್ಕೆ ತನ್ನ ಜೀವವನ್ನೇ ಬಲಿಕೊಟ್ಟ ಘಟನೆ 2021ರ ಜೂನ್ನಲ್ಲಿ ನಡೆದಿದೆ. ಕೇರಳದ ಕೊಲ್ಲಂನ ವಿಸ್ಮಯಾ ವಿ.ನಾಯರ್ ಎಂಬ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ, ತನ್ನ ಪತಿ ಕಿರಣ್ ಕುಮಾರ್ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಹಾಗೂ ಆತನ ಮನೆಯವರ ವಿರುದ್ಧ ದೂರು ನೀಡಿದ್ದ ವಿಸ್ಮಯಾ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಿರಣ್ ಕುಮಾರ್, ಕೇರಳದ ಮೋಟಾರ್ ವಾಹನ ಇಲಾಖೆಯ ಅಧಿಕಾರಿಯಾಗಿದ್ದ. ವಿಸ್ಮಯಾ ಸಾವಿನ ಬಳಿಕ ಆತನನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಬಂಧಿಸಲಾಯಿತು. ಮತ್ತು ಸರ್ಕಾರಿ ಕೆಲಸದಿಂದ ಆತನನ್ನು ವಜಾಗೊಳಿಸಲಾಯಿತು. ಕಿರಣ್ ಕುಮಾರ್ ಒಂದು ಹೊಸ ಕಾರಿಗಾಗಿ ತನ್ನ ಪತ್ನಿ ವಿಸ್ಮಯಾಗೆ ಹಿಂಸೆ ನೀಡುತ್ತಿದ್ದ ಎಂಬ ವಿಚಾರ ನಂತರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 500 ಪುಟಗಳ ಚಾರ್ಜ್ಶೀಟ್ನ್ನು ಕೋರ್ಟ್ನಲ್ಲಿ ಸಲ್ಲಿಸಿದ್ದರು.
ದೇವರ ನಾಡಲ್ಲಿ ನಾಯಿ ಹತ್ಯೆ
ಈ ಘಟನೆ ಪ್ರಾಣಿ ಪ್ರಿಯರ ಮತ್ತು ಪ್ರಾಣಿ ಪ್ರಿಯರಲ್ಲದವರ ಎದೆಯನ್ನೂ ನಡುಗಿಸಿತ್ತು. ಜುಲೈ ತಿಂಗಳಲ್ಲಿ ಕೇರಳದ ಆದಿಮಲತೂರ ಬೀಚ್ನಲ್ಲಿ ಮೂವರು ಯುವಕರ ಗುಂಪು, ಬ್ರುನೋ ಎಂಬ ಕಪ್ಪು ಬಣ್ಣದ ಲ್ಯಾಬ್ರಡಾರ್ ನಾಯಿಯನ್ನು ಹಿಂಸಾತ್ಮಕವಾಗಿ ಕೊಂದು ಹಾಕಿತ್ತು. ಮೀನುಗಾರಿಕೆ ಬೋಟ್ಗೆ ಬ್ರುನೋವನ್ನು ಕಟ್ಟಿ ಹಾಕಿ ಹೊಡೆದು ಕೊಂದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಬ್ರುನೋ ಹತ್ಯೆಯ ಬಳಿಕ ದೇಶದ ಜನರು ಸಿಡಿದೆದ್ದಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಜಸ್ಟೀಸ್ ಫಾರ್ ಬ್ರುನೋ ಎಂಬ ಅಭಿಯಾನವೂ ನಡೆಯಿತು. ಕೇರಳ ಹೈಕೋರ್ಟ್ ಸುಮೊಟೊ ವಿಚಾರಣೆ ಕೈಗೆತ್ತಿಕೊಂಡಿತು. ಮೃತ ಲ್ಯಾಬ್ರಡಾರ್‌ಗೆ ಗೌರವ ಸಲ್ಲಿಸಲು ನ್ಯಾಯಾಲಯವು ಪ್ರಕರಣಕ್ಕೆ ಇನ್ ರೆ: ಬ್ರೂನೋ ಎಂದು ಮರುನಾಮಕರಣ ಮಾಡಿತು.
ಧನಬಾದ್ ಜಡ್ಜ್ ಹತ್ಯೆ
ನ್ಯಾಯಾಂಗದ ಮೇಲೆ ನಡೆದ ನಿರ್ಲಜ್ಜ ದಾಳಿ ಇದು. ಜಾರ್ಖಂಡ್ನ ಧನಬಾದ್ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ADJ) ಉತ್ತಮ್ ಆನಂದ್ (49) ಮುಂಜಾನೆ ಜಾಗಿಂಗ್ ಹೋಗಿದ್ದಾಗ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದಿತ್ತು. ಅದನ್ನು ಮೊದಲು ಅಪಘಾತ ಎಂದುಕೊಳ್ಳಲಾಗಿದ್ದರೂ, ಸಿಸಿಟಿವಿ ಫೂಟೇಜ್ ನೋಡಿದಾಗ ಅದೊಂದು ಕೊಲೆ ಎಂಬುದು ದೃಢಪಟ್ಟಿತ್ತು. ಈ ಘಟನೆ ನಡೆದಿದ್ದು ಜುಲೈ 28ರಂದು. ರಸ್ತೆ ಬದಿಯಲ್ಲಿ ಜಾಗಿಂಗ್ ಮಾಡುತ್ತಿದ್ದ ನ್ಯಾಯಾಧೀಶರಿಗೆ ಆ ವಾಹನ ಡಿಕ್ಕಿ ಹೊಡೆದಿದ್ದು ಸ್ಪಷ್ಟವಾಗಿ ಸಿಸಿಟಿವಿ ಫೂಟೇಜ್ನಲ್ಲಿ ಕಾಣಿಸುತ್ತಿತ್ತು. ಇದು ನ್ಯಾಯಾಂಗದ ಮೇಲೆ ನಡೆದ ನಿರ್ಲಜ್ಜ ದಾಳಿ ಎಂದು ಸುಪ್ರೀಂಕೋರ್ಟ್ನ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಕಾಸ್ ಸಿಂಗ್ ಹೇಳಿದ್ದರು. ಈ ಪ್ರಕರಣವನ್ನು ಜಾರ್ಖಂಡ ಹೈಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಸುಪ್ರಿಂಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿತ್ತು. ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
ಯುವಕನ ಪ್ರಾಣ ಬಲಿ ಪಡೆದ ಪ್ರೀತಿ
ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಮುಸ್ಲಿಂ ಯುವಕನ ಕೊಲೆ ಮೈ ನಡುಗಿಸುವಂಥದ್ದು. ಈ ಮುಸ್ಲಿಂ ಯುವಕ, ಹಿಂದು ಧರ್ಮದ ಯುವತಿಯೊಂದಿಗೆ ಪ್ರೀತಿಯಲ್ಲಿ ತೊಡಗಿದ್ದ. ಆದರೆ ಆತ ಬರ್ಬರವಾಗಿ ಹತ್ಯೆಯಾಗಿದ್ದ. ಯುವಕನ ದೇಹವನ್ನು ಛಿದ್ರವಾಗಿಸಿ, ದೇಹದ ಭಾಗಗಳನ್ನು ರೈಲ್ವೆ ಹಳಿಗಳ ಮೇಲೆ ಎಸೆಯಲಾಗಿತ್ತು. ಅಂದಹಾಗೆ ಯುವಕನ ಹೆಸರು ಅರ್ಬಾಜ್ ಮುಲ್ಲಾ.
ಬರೀ ಇವಿಷ್ಟೇ ಎಂದಲ್ಲ. ಒಂದು ವರ್ಷದಲ್ಲಿ ಅನೇಕಾನೇಕ ಕ್ರೈಂಗಳು ನಡೆದಿವೆ. ರೇಪ್ಗಳು, ಕೊಲೆ, ಕಳ್ಳತನ ಹೀಗೆ ಪ್ರತಿನಿತ್ಯ ದೇಶದ ಒಂದಲ್ಲ ಒಂದು ಭಾಗಗಳಿಂದ ಅಪರಾಧ ಸುದ್ದಿಗಳು ವರದಿಯಾಗುತ್ತಲೇ ಇವೆ. ಆದರೆ ಇಡೀ ವರ್ಷದಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿ, ಚರ್ಚೆಗೆ ಒಳಗಾದ ಅಪರಾಧಗಳು ಇವು.