ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಎಚ್.ಡಿ, ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ಮೇಲಿನ ವಾದ ಪ್ರತಿ ವಾದ ಅಂತ್ಯಗೊಂಡಿದ್ದು, ಇಂದು ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಕಟಿಸಿದ್ದಾರೆ.
ಮೇ 9ರಂದು ನಡೆದ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ವೇಳೆ, ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಜಯ್ನಾ ಕೊಠಾರಿ, 'ಆರೋಪಿ ರೇವಣ್ಣ ನೀಡಿದ್ದ ಸೂಚನೆಯ ಅನುಸಾರವೇ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಸಾಕ್ಷಿಗಳ ಹೇಳಿಕೆಯಲ್ಲಿಯೂ ರೇವಣ್ಣನ ಹೆಸರು ಉಲ್ಲೇಖವಾಗಿದೆ. ಇದು ಸ್ಪಷ್ಟವಾಗಿ ಅಪಹರಣದ ಪ್ರಕರಣವಾಗಿದ್ದು, ಭಾರತೀಯ ದಂಡ ಸಂಹಿತೆ '1860ರ ಕಲಂ 364' ಅನ್ವಯ ಆಗುತ್ತದೆ ಎಂದಿದ್ದರು.
ಇದಕ್ಕೆ ಪ್ರತಿಯಾಗಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಿ.ವಿ.ನಾಗೇಶ್, 'ರಾಜಕೀಯ ಉದ್ದೇಶದಿಂದ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ಈತನಕ ಒಂದೇ ಒಂದು ಸಾಕ್ಷಿಯೂ ದೊರೆತಿಲ್ಲ ಎಂದು ವಾದಿಸಿದ್ದರು.
ಇನ್ನಷ್ಟು ಮಂಡಿಸಬೇಕಿದ್ದ ವಾದಕ್ಕಾಗಿ ಸಮಯ ನೀಡಬೇಕು ಎಂಬ ಪ್ರಾಸಿಕ್ಯೂಷನ್ ಕೋರಿಕೆಯನ್ನು ಮನ್ನಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದಾರೆ. ಅದರಂತೆ ಇಂದು ಸಂಜೆ ಆದೇಶ ಪ್ರಕಟಗೊಳ್ಳಲಿದೆ.