ಬೆಂಗಳೂರು: ಮಹಿಳೆಯರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್ ಡಿ ರೇವಣ್ಣರನ್ನು ನ್ಯಾಯಾಲಯ ನ್ಯಾಯಾಂಗ ವಶಕ್ಕೊಪ್ಪಿಸಿದೆ. ಎಸ್ಐಟಿ ಕಸ್ಟಡಿ ಇಂದಿಗೆ ಮುಕ್ತಾಯವಾಗಿತ್ತು.
ಮೊನ್ನೆಯಷ್ಟೇ ಮಹಿಳೆಯ ಅಪಹರಣ ಕೃತ್ಯದಲ್ಲಿ ಬಂಧಿತರಾಗಿದ್ದ ಎಚ್ ಡಿ ರೇವಣ್ಣರನ್ನು ಎಸ್ಐಟಿ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ವೇಳೆ ತನಿಖೆಗಾಗಿ ನ್ಯಾಯಾಲಯ ಮೂರು ದಿನಗಳ ಕಾಲ ರೇವಣ್ಣರನ್ನು ಎಸ್ಐಟಿ ವಶಕ್ಕೊಪ್ಪಿಸಿತ್ತು.
ಇಂದು ರೇವಣ್ಣ ಎಸ್ಐಟಿ ಕಸ್ಟಡಿ ಮುಕ್ತಾಯವಾಗಿದ್ದರಿಂದ ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವೇಳೆ ಅವರಿಗೆ ಜಾಮೀನು ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್ ಮೇ 14 ರವರೆಗೆ ನ್ಯಾಯಾಂಗ ಬಂಧನದಲ್ಲಿರುವಂತೆ ಆದೇಶಿಸಿದೆ.
ಇಂದು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಿದ್ದ ರೇವಣ್ಣಗೆ ಆಘಾತವಾಗಿದೆ. ಇದೀಗ ಅವರಿಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ನಾಳೆ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಅವರು ಜಾಮೀನು ಸಿಗುವವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯಬೇಕಿದೆ.
ಪ್ರಜ್ವಲ್ ರೇವಣ್ಣರಿಂದ ದೌರ್ಜನ್ಯಕ್ಕೊಳಗಾದವರಲ್ಲಿ ಒಬ್ಬರೆನ್ನಲಾದ ಮಹಿಳೆಯ ಪುತ್ರ ತನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಮಹಿಳೆಯನ್ನು ರೇವಣ್ಣ ತನ್ನ ಆಪ್ತನ ಮೂಲಕ ಅಪಹರಿಸಿದ್ದರೆಂದು ಆರೋಪವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸತೀಶ್ ಬಾಬು ಎಂಬಾತನನ್ನು ಬಂಧಿಸಲಾಗಿತ್ತು.