ಕರ್ನಾಟಕದ ಪ್ರಸಿದ್ಧ ಬಯಲು ಗಣಪ ಖ್ಯಾತಿಯ ಪುಣ್ಯಕ್ಷೇತ್ರಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಹಬ್ಬದ ದಿನದ ಅಂಗವಾಗಿ ಸಾವಿರಾರು ಭಕ್ತರು ಪೂಜಾ ವಿಧಿಗಳಲ್ಲಿ ಪಾಲ್ಗೊಂಡರು. ಶ್ರೀ ಗಣೇಶನಿಗೆ ಮೊರೆಹೋಗಿ ಪ್ರಾರ್ಥನೆ ಸಲ್ಲಿಸಿ, ಆತನ ಕೃಪೆಗೆ ಪಾತ್ರರಾದರು.
ಸೌತಡ್ಕ ಗಣೇಶ ಮೂರ್ತಿಯು ಬಯಲು ಪ್ರದೇಶದಲ್ಲಿ ಇರುವುದು ಈ ಪುಣ್ಯಕ್ಷೇತ್ರದ ವಿಶೇಷ. ಶ್ರೀ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರಕ್ಕೆ ಸಂಚರಿಸುವ ರಾಜ್ಯ ಹೆದ್ದಾರಿಯಲ್ಲಿ ಬರುವ ಈ ಕ್ಷೇತ್ರಕ್ಕೆ ದಿನಂಪ್ರತಿ ನೂರಾರು ಭಕ್ತರು ಭೇಟಿ ನೀಡುತ್ತಾರೆ.
ಆದರೆ ಗೌರಿ ಗಣೇಶ ಹಬ್ಬದ ದಿನ ಇಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ.