ರಾಜ್ಯದ ಇಲಾಖೆಯೊಂದರ ಸಮಸ್ಯೆಗೆ ಮುಕ್ತಿ ಸಿಕ್ಕಿದೆ ಎಂದು ಸಚಿವರೊಬ್ಬರು ಹೇಳಿಕೊಂಡಿದ್ದಾರೆ.
ಪಶುಸಂಗೋಪನೆ ಇಲಾಖೆಯ 66 ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಜಿಲ್ಲಾ ಉಪನಿರ್ದೇಶಕರನ್ನಾಗಿ ನೇಮಿಸಿ ಪದೋನ್ನತಿ ಆದೇಶ ಹೊರಡಿಸಲಾಗಿದೆ. ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶುಸಂಗೋಪನೆ ಇಲಾಖೆಯ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಗೆ ಸಂಬಂಧಿಸಿದ ಆದೇಶ ಹೊರಡಿಸಿರುವ ಬಗ್ಗೆ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
‘ಪಶುಸಂಗೋಪನಾ ಇಲಾಖೆಯ ಅಧಿಕಾರ ವಹಿಸಿಕೊಂಡ ನಂತರ ಇಲಾಖಾ ಕಾರ್ಯದರ್ಶಿ, ಹಿರಿಯ ಅಧಿಕಾರಿಗಳು, ವಿವಿಧ ವೃಂದದ ಸಂಘದ ಪದಾಧಿಕಾರಿಗಳು ಪಶುಸಂಗೋಪನೆ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶು ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಯ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಿದ್ದರು.
ಈ ಸಮಸ್ಯೆ ಪರಿಹರಿಸಲು ಹಲವು ಬಾರಿ ಪ್ರಯತ್ನ ನಡೆಸಿದ್ದೆ. ಇಲಾಖೆಯ ನೌಕರರು ಈ ವಿಷಯದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಸಂಘದ ಎಲ್ಲ ಪದಾಧಿಕಾರಿಗಳು, ಕಾರ್ಯದರ್ಶಿಯವರ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ನಡೆಸಿ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಗೆ ಇದ್ದ ಅಡೆತಡೆಗಳನ್ನು ಬಗೆಹರಿಸಲಾಗಿದೆ.
ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದೆ. ಇಲಾಖಾ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ತಂಡ ರಚಿಸಿ ಯಾರಿಗೂ ತೊಂದರೆ ಆಗದಂತೆ ಎಚ್ಚರವಹಿಸಿ 66 ಮುಖ್ಯ ಪಶುವೈದ್ಯಾಧಿಕಾರಿಗಳಿಗೆ ಪದೋನ್ನತಿಗೆ ಆದೇಶ ಹೊರಡಿಸಿರುವುದು ಹರ್ಷ ತಂದಿದೆ ಎಂದಿದ್ದಾರೆ.