ಸಂಕಷ್ಟದ ಸಮಯದಲ್ಲಿ ರಾಜ್ಯ, ಕೇಂದ್ರ ಸರ್ಕಾರ ನಿಮ್ಮೊಂದಿಗೆ ಇರಲಿದೆ; ಸಚಿವ ಶ್ರೀರಾಮುಲು
ಸೋಮವಾರ, 16 ಆಗಸ್ಟ್ 2021 (16:09 IST)
ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ನಾವು ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಇದ್ದೇವೆ. ಒಂದು ಕಡೆ ಕೋವಿಡ್ ಮೂರನೇ ಅಲೆಯ ಸವಾಲು ನಮ್ಮ ಮುಂದಿದೆ. ಮತ್ತೊಂದು ಕಡೆ ಭೀಕರ ಪ್ರವಾಹದಿಂದ ರಾಜ್ಯದ ಹಲವಾರು ಕಡೆ ಜನ ಜೀವನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವಾಗಲೂ ನಿಮ್ಮೊಂದಿಗೆ ಇರಲಿದ್ದು, ನಿಮ್ಮಗಳ ಸೇವೆಯೇ ನಮ್ಮ ಗುರಿಯಾಗಿದೆ ಎಂದು ರಾಜ್ಯ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ಚಿತ್ರದುರ್ಗ ಪೋಲೀಸ್ ಕವಾಯತು ಮೈದಾನದಲ್ಲಿ ಭಾನುವಾರ 75ನೇ ಭಾರತ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಭಾರತ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಭಾರತ ದೇಶ ಎಲ್ಲಾ ರಂಗಗಳಲ್ಲೂ ಪ್ರಗತಿ ಸಾಧಿಸುತ್ತಿದೆ. ವ್ಯವಸ್ಥಾಯ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕ್ರೀಡೆ ಹೀಗೆ ಎಲ್ಲಾ ರಂಗಗಳಲ್ಲಿಯೂ ಭಾರತೀಯರ ಸಿಂಹ ಘರ್ಜನೆ ಇಡೀ ವಿಶ್ವದ ಮೂಲೆ ಮೂಲೆಯಲ್ಲಿ ಕೇಳಿಸುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ದೇಶದ ಪ್ರಧಾನ ಮಂತ್ರಿಗಳು ಸಂಕಲ್ಪ ತೊಟ್ಟಿದ್ದಾರೆ . ನಮ್ಮ ದೇಶವು ಸ್ವಾತಂತ್ರ್ಯ ಹೊಂದಿ 74 ವರ್ಷಗಳು ಪೂರ್ಣಗೊಂಡಿದ್ದು, 75ನೇ ವರ್ಷಕ್ಕೆ ಕಾಲಿಡುತ್ತಿರುವ ನಾವು ಇಂದು ದೇಶಾದ್ಯಂತ ಸಂಭ್ರಮ ಸಡಗರಗಳಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.
ಸರ್ಕಾರ ರೈತರ ಮಕ್ಕಳೂ ಸಹ ಶಿಕ್ಷಣವಂತಾಗಬೇಕು ಹಾಗೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ಇವರಿಗೂ ವಿದ್ಯಾರ್ಥಿ ವೇತನ ನೀಡುವ ಹೊಸ ಯೋಜನೆ ರೂಪಿಸಿದೆ. ಇದಲ್ಲದೆ ಪರಿಶಿಷ್ಟ ಪಂಗಡದ ಜನರ ಬಹುದಿನಗಳ ಬೇಡಿಕೆಯಾದ ಪರಿಶಿಷ್ಟ ವರ್ಗಗಳ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಈಡೇರಿಸಿದೆ. ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿ ಇದೆ. ಯೋಜನೆಯಿಂದ ಜಿಲ್ಲೆಯ 1.54 ಲಕ್ಷ ಹೆಕ್ಟೇರ್ ಹನಿ ನೀರಾವರಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ. 204 ಕೆರೆಗಳ ಸಾಮಥ್ರ್ಯದ ಶೇ.50ರಷ್ಟು ನೀರನ್ನು ತುಂಬಿಸಲು ಯೋಜಿಸಲಾಗಿದೆ. ಕೋವಿಡ್ ಕಷ್ಟ ಕಾಲದಲ್ಲೂ ನಮ್ಮ ಸರ್ಕಾರ ಅಭಿವೃದ್ಧಿ ಯೋಜನೆಗಳಾದ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ತುಂಗಾಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಗಳನ್ನು ಯಶಸ್ವಿಯಾಗಿ ಕೈಗೊಂಡಿದೆ. ಗಂಡು ಮೆಟ್ಟಿದ ನಾಡು, ಮದಕರಿ ನಾಯಕನ ಬೀಡು ಹೆಸರು ಚಿತ್ರದುರ್ಗ ಇಂದು ಜಾಗತಿಕ ಪುಟದಲ್ಲಿ ಹೆಸರು ಮಾಡುತ್ತಿದೆ ಎಂದು ಹೇಳಿದರು.
ಇನ್ನೂ ಬಾರ್ಕ್ ಹಾಗೂ ಇಸ್ರೊ ಕೇಂದ್ರಗಳ ಜೊತೆಗೆ ಇಲ್ಲಿ ಗಗನಯಾತ್ರಿಗಳ ತರಬೇತಿ ಕೇಂದ್ರ ಆರಂಭವಾಗಲಿದೆ. ಇದರಿಂದ ಈ ಭಾಗದ ಯುವಕರಿಗೆ ಉದ್ಯೋಗದ ಸ್ಪೂರ್ತಿ ತುಂಬಲಿದೆ ಎಂದು ಹೇಳಿದರು. ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಕಳೆದ 5 ವರ್ಷಗಳಿಂದ ರೂ.249.55 ಕೋಟಿ ಸಂಗ್ರಹವಾಗಿದ್ದು, ಇದರಲ್ಲಿ ರೂ.92.34 ಕೋಟಿ ರೂಗಳನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಮೀಸಲಿಟ್ಟ ರೂ.36.7 ಕೋಟಿಯಲ್ಲಿ ರೂ.29.68 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಜಿಲ್ಲೆಯ ಸಮಸ್ಯೆಗಳಾದ ನೀರಾವರಿ, ನೇರ ರೈಲ್ವೆ, ವೈದ್ಯಕೀಯ ಕಾಲೇಜು, ಕೈಗಾರಿಕೆಗಳು ನೆಲೆಗೊಳ್ಳುವ ದಿಕ್ಕಿನಲ್ಲಿ ಸರ್ಕಾರ ಕಟಿಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು.