ಬೇಡಿಕೆ ಈಡೇರದೆ ಬೇಸತ್ತ ಗ್ರಾಮಸ್ಥರಿಂದ ಬೈ ಎಲೆಕ್ಷನ್ ಮತದಾನ ಬಹಿಷ್ಕಾರದ ಬೆದರಿಕೆ!
ಸೋಮವಾರ, 29 ಅಕ್ಟೋಬರ್ 2018 (16:29 IST)
ಊರು ಪ್ರಗತಿ ಹೊಂದಿಲ್ಲ. ರಾಜಕಾರಣಿಗಳ ನಿರ್ಲಕ್ಷ್ಯ ಮುಂದುವರಿದಿದೆ. ಹಲವು ವರ್ಷಗಳಿಂದ ಮಾಡಿದ ಹೋರಾಟ ಪ್ರಯೋಜನಕ್ಕಿಲ್ಲ. ನಮ್ಮ ಸಮಸ್ಯೆಯನ್ನು ಕಣ್ಣೆತ್ತಿ ರಾಜಕಾರಣಿಗಳು ಕಾಣುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಬೈ ಎಲೆಕ್ಷನ್ ನಲ್ಲಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಚುನಾವಣಾ ಸಮಯದಲ್ಲಿ ಮತದಾರರಿಗೆ ಆಸ್ವಾಸನೆ ಕೊಟ್ಟು ಮತ ಗಿಟ್ಟಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿದ ಬಳಿಕ ಮತದಾರರನ್ನು ಮರೆಯುವ ಜನಪ್ರತಿನಿಧಿಗಳ ವಿರುದ್ದ ಬಿಜೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನಾಲ್ಕನೇ ವಾರ್ಡ್‌ನ ಗ್ರಾಮಸ್ಥರು ಸಿಡಿದೆದ್ದಿದ್ದು, ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಬಿಜೂರು ಗ್ರಾಮದ ನಾಲ್ಕನೆ ವಾರ್ಡ್ (ಬಿಜೂರು ಶೆಟ್ರಕೇರಿ ರಸ್ತೆ) ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದು ಅಲ್ಲಲ್ಲಿ ‘ಪ್ಲೇ ಕಾರ್ಡ್’ನಲ್ಲಿ ಮತದಾನದ ಬಹಿಷ್ಕಾರ ಎಚ್ಚರಿಕೆ ನೀಡಿದ್ದು ಅಧಿಕಾರಿ ವರ್ಗದ ಸಮೇತ ಇದೀಗ ವಿವಿಧ ಪಕ್ಷಗಳ ರಾಜಕೀಯ ಮುಖಂಡರಿಗೆ ತಲೆನೋವು ಆರಂಭವಾಗಿದೆ.
ಹಲವಾರು ವರ್ಷಗಳಿಂದ ಬಿಜೂರು ನಾಲ್ಕನೇ ವಾರ್ಡ್‌ಗೆ ಅನುದಾನಗಳನ್ನೇ ನೀಡಿಲ್ಲ. ಇದರಿಂದ ಯಾವುದೇ ಅಭಿವೃದ್ದಿಯೂ ಇಲ್ಲಿ ಆಗಿಲ್ಲ. ಗ್ರಾಮಪಂಚಾಯಿತಿಗೆ ಸಾಕಷ್ಟು ಮೊತ್ತದಲ್ಲಿ ಅನುದಾನ ಬರುತ್ತೆ. ಆದರೆ ನಮ್ಮ ವಾರ್ಡ್‌ನಲ್ಲಿ ಇದುವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ. ಕುಡಿಯುವ ನೀರಿನ ಸಮಸ್ಯೆ, ದಾರಿದೀಪ ಮುಂತಾದ ಮೂಲಭೂತ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಜನರಿಗೆ ಸಿಗುವ ಕಡಿಮೆ ದರದ ಪಡಿತರ ತರಲು ಕಿಲೋಮೀಟರುಗಟ್ಟಲೇ ಆಟೋ ರಿಕ್ಷಾದಲ್ಲಿ ಸಾಗಿ ನೂರಾರು ರೂಪಾಯಿ ವ್ಯಯಿಸಬೇಕು. ಪ್ರತೀ ಬಾರಿ ಚುನಾವಣೆ ಬಂದಾಗ ಆಶ್ವಾಸನೆ ಕೊಟ್ಟು ಹೋಗುವ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಪರಿಹಾರ ಮಾಡಿಲ್ಲ. ನಮಗೆ ಸಮಸ್ಯೆ ನಿವಾರಣೆಯಾಗಲೇಬೇಕಿದ್ದು ಹೀಗಾಗಿ ನಾವೇ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ಬಿಜೂರು ಶೆಟ್ರಕೇರಿ ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಗ್ರಾಮಸ್ಥರ ಈ ಚುನಾವಣಾ ಬಹಿಷ್ಕಾರ ಫೋಟೋ ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಬಳಿಕವೇ ಉಭಯ ಪಕ್ಷಗಳ ಮುಖಂಡರು ಮತ್ತು ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.