ಸಂಕ್ರಾಂತಿಗೆ ಸೂರ್ಯ ಮಾತ್ರ ತನ್ನ ಪಥ ಬದಲಾಯಿಸುತ್ತಾನೆ. ಸರ್ಕಾರ ಮತ್ತು ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿಯವರ ಸಂಕ್ರಾಂತಿಗೆ ‘ಕ್ರಾಂತಿ’ ಎಂಬ ಹೇಳಿಕೆಗೆ ಶಾಸಕ ಎನ್.ಮಹೇಶ್ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದ ಕಸ್ತೂರು ಬಂಡಿ ಜಾತ್ರೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿ ಬೆಳೆದಿರುವುದರಿಂದ ಅಷ್ಟು ಸುಲಭವಾಗಿ ಪಕ್ಷ ಬಿಡಲು ಸಾಧ್ಯವಿಲ್ಲ. ನಾನು ಬಿಎಸ್ಪಿಯ ನಿಷ್ಠಾವಂತ ಕಾರ್ಯಕರ್ತ ಎಂದರು.
ಪ್ರಧಾನಿ ನರೇಂದ್ರ ಮೋದಿ , ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕ್ಲರ್ಕ್ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ರಾಜ್ಯದ ಅಧಿಕೃತ ಮುಖ್ಯಮಂತ್ರಿಯನ್ನ ಕ್ಲರ್ಕ್ ಅಂತ ಒಬ್ಬ ಪ್ರಧಾನ ಮಂತ್ರಿ ಹಾಗೆಲ್ಲ ಮಾತನಾಡಬಾರದು. ಪ್ರಧಾನ ಮಂತ್ರಿ ಸ್ಥಾನಕ್ಕೆ ಅವರ ಘನತೆಗೆ ಇದರಿಂದ ಧಕ್ಕೆಯಾಗುತ್ತದೆ. ಜನರಿಂದ ಆಯ್ಕೆಯಾಗಿರುವವರು, 117 ಜನ ಶಾಸಕರ ಬೆಂಬಲ ಪಡೆದುಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಕುಮಾರಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣ ಕುರಿತು ನಾನೇನು ಮಾತನಾಡುವುದಿಲ್ಲ. ಆ ಕುರಿತು ತನಿಖೆ ನಡೆಯುತ್ತಿದೆ. ಆ ನಂತರ ತೀರ್ಮಾನ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಪ್ರತಿಕ್ರಿಯಿಸಿದರು.