ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರಲ್ಲ: ಸಚಿವ ದಿನೇಶ್ ಗುಂಡೂರಾವ್

ಭಾನುವಾರ, 17 ಸೆಪ್ಟಂಬರ್ 2023 (12:55 IST)
ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಸಮಸ್ಯೆ ಪರಿಹರಿಸಲಾಗುತ್ತಿದ್ದು, ಡಿಸೆಂಬರ್ ಬಳಿಕ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕರಿಸಿದ ತುರ್ತು ನಿಗಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಔಷಧಿ ಸರಬರಾಜು ಕಾರ್ಪೊರೇಷನ್ ಆಸ್ಪತ್ರೆಗಳಿಗೆ ಸರಿಯಾಗಿ ಔಷಧಿಗಳನ್ನ ಪೂರೈಕೆ ಮಾಡುತ್ತಿರಲಿಲ್ಲ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ ಎಂದು ಯಾರೂ ಹೇಳಬಾರದು. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಔಷಧಿಗಳನ್ನ ಆಸ್ಪತ್ರೆಗಳಿಗೆ ಪೂರೈಸುವಂತೆ ತಾಕೀತು ಮಾಡಿದ್ದೇನೆ ಎಂದು ತಿಳಿಸಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಯ ಜೊತೆಗೆ ಸಮರ್ಪಕವಾಗಿ ಉಚಿತ ಔಷಧಿಗಳು ಸಿಗುವಂತಾಗಬೇಕು. ಸರಿಯಾಗಿ ಔಷಧಿಗಳು ಸಿಕ್ಕಾಗ ಮಾತ್ರ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಲು ಸಾಧ್ಯ. ಹಾಗೆ ನೋಡಿದರೆ ಆಸ್ಪತ್ರೆಯ ಹೊರಗಡೆ ಜನೌಷಧಿ ಕೇಂದ್ರಗಳ ಅವಶ್ಯಕತೆಯೇ ಇಲ್ಲ.

ಆಸ್ಪತ್ರೆಗಳಲ್ಲೇ ಔಷಧಿಗಳು ಸರಿಯಾಗಿ ದೊರೆತರೆ, ಜನರು ಬೇರೆ ಕಡೆ ಔಷಧಿ ಪಡೆಯಲು ತಿರುಗಾಡುವ ಅಗತ್ಯತೆಯೇ ಬರೋದಿಲ್ಲ. ವೈದ್ಯರು ಹೊರಗಡೆ ಔಷಧಿ ತೆಗೆದುಕೊಳ್ಳುವಂತೆ ರೋಗಿಗಳಿಗೆ ಚೀಟಿ ಬರೆದುಕೊಡುವ ಪದ್ಧತಿಯನ್ನ ಬದಲಿಸಬೇಕು ಎಂದು ತಾಕೀತು ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ