ಅದು ರಾಜ್ಯದ ಪ್ರಪ್ರಥಮ ಸ್ಕಿನ್ ಬ್ಯಾಂಕ್. ರಾಜ್ಯ ರಾಜಧಾನಿಯ ಕೀರ್ತಿಯನ್ನ ಎತ್ತಿಹಿಡಿದಿದ್ದ ಚರ್ಮ ನಿಧಿ. ಆದ್ರೆ ಇದೀಗ ಆ ಸ್ಕಿನ್ ಬ್ಯಾಂಕ್ಗೆ ಚರ್ಮದ ಅಭಾವ ಎದುರಾಗಿಬಿಟ್ಟಿದೆ. ಅದೆಷ್ಟೋ ಸುಟ್ಟಗಾಯಗಳಿಂದ ಬಳಲುತ್ತಿದ್ದವರಿಗೆ ಸಂಜೀವಿನಿಯಾಗಿದ್ದ ಚರ್ಮ ನಿಧಿ ಇದೀಗ ಚರ್ಮದ ಕೊರತೆ ಎದುರಿಸುತ್ತಿದೆ. ಸುಟ್ಟಗಾಯಗಳಿಂದ ಬಳಲಿ ಬಂದವರಿಗೆ ಸಂಜೀವಿನಿಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ಚರ್ಮನಿಧಿಗೆ ಚರ್ಮದ ಕೊರತೆ ಎದುರಾಗಿದೆ. 2016 ರಲ್ಲಿ ಆರಂಭವಾದ ರಾಜ್ಯದ ಪ್ರಪ್ರಥಮ ಚರ್ಮನಿಧಿ ಇದಾಗಿದ್ದು, ಇದೀಗ ರೋಗಿಗಳಿಗೆ ಸಾಕಾಗುವಷ್ಟು ಚರ್ಮ ಸ್ಟಾಕ್ ಇಲ್ಲದೇ ಇರೋದು ವೈದ್ಯರಿಗೆ ಆತಂಕ ತಂದಿದೆ. ಬೇಸಿಗೆ ಆರಂಭದಲ್ಲೇ ಚರ್ಮದ ಕೊರತೆ ಎದುರಾಗಿರೋದು ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಬೆಂಕಿ ಅವಘಡಗಳು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೀಡಲು ಚರ್ಮದ ಕೊರತೆ ಇದೆ ಅಂತಾ ಸ್ಕಿನ್ ಬ್ಯಾಂಕ್ ವೈದ್ಯರ ತಂಡ ಕಳವಳ ವ್ಯಕ್ತಪಡಿಸಿದೆ.
ಇನ್ನು ಈ ಚರ್ಮ ನಿಧಿ ದೇಶದಲ್ಲೇ ಮೂರನೇ ಕೇಂದ್ರವಾಗಿದ್ದು, ಮುಂಬೈನ ರಾಷ್ಟ್ರೀಯ ಸುಟ್ಟಗಾಯಗಳ ಕೇಂದ್ರ ಮತ್ತು ಚೆನ್ನೈನ ರೈಟ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಚರ್ಮ ನಿಧಿ ಕಾರ್ಯ ನಿರ್ವಹಿಸುತ್ತಿವೆ. ಆ್ಯಸಿಡ್ ದಾಳಿ, ಆಕಸ್ಮಿಕ ಬೆಂಕಿ ಅವಘಡಗಳಿಂದ ಸುಟ್ಟು ಕುರೂಪಗೊಂಡ ದೇಹಕ್ಕೆ ಹೊಸ ರೂಪ ನೀಡುವ ಮೂಲಕ ರೋಗಿಯ ಜೀವ ಉಳಿಸಲು ಈ ಚರ್ಮ ನಿಧಿ ವರದಾನವಾಗಿದೆ. ಇತ್ತ ಚರ್ಮದಾನಿಗಳು ಇಳಿಕೆಯಾಗ್ತಿರೋದು, ಸಂಗ್ರಹಿಸಿದ ಚರ್ಮವನ್ನ ಬಳಕೆಗೆ ಯೋಗ್ಯ ಮಾಡುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತಿರೋದು ಚರ್ಮದ ಕೊರತೆಗೆ ಕಾರಣವಾಗ್ತಿದೆ. ಇನ್ನು ವ್ಯಕ್ತಿ ಸತ್ತ ಬಳಿಕ 6 ಗಂಟೆಯ ಒಳಗೆ ಚರ್ಮ ಸಂಗ್ರಹ ಮಾಡಬೇಕಿದ್ದು, ಈ ವೇಳೆ ಹಲವರಿಗೆ ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರೋದು ಕೂಡ ಚರ್ಮದ ಅಭಾವಕ್ಕೆ ಕಾರಣವಾಗ್ತಿದೆ.