ನಗರದ ಮಕ್ಕಳಲ್ಲಿ ಕೋವಿಡ್ ಸೊಂಕು ಪ್ರಮಾಣದ ಕಂಡುಬಂದಿಲ್ಲ

ಮಂಗಳವಾರ, 17 ಆಗಸ್ಟ್ 2021 (21:34 IST)
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೊಂಕು ಪ್ರಮಾಣ ಮಕ್ಕಳಲ್ಲಿ ಯಾವುದೇ ಏರಿಕೆಯಿಲ್ಲ. ಬಹುತೇಕ ಮಕ್ಕಳಲ್ಲಿ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳು ಮಾತ್ರ ಕಂಡುಬರುತ್ತಿದ್ದು, ಮನೆಯಲ್ಲೇ ಗುಣಮುಖರಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದವರ  ಸಂಖ್ಯೆ ತೀರಾ ಕಡಿಮೆಯಿದೆ. ಈ ಸಂಬಂಧ ಈಗಾಗಲೇ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದ್ದು, ಮಕ್ಕಳ ಮೇಲೆ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಹೇಳಿದರು.
 
ಶಿಲ್ಪ ಸಿಂಗ್ ಮತ್ತು ಪಾರ್ಸಿಯಾ ಸಿಂಗ್ ರವರಿಂದ ಕೋವಿಡ್ ಸೋಂಕು ತಡೆಯುವ ಸಲುವಾಗಿ ಡಾ. ಬಾಬು ಜಗಜೀವನ್ ರಾಮ್ ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕೀಯ ಉಪಕರಣ(ಮಕ್ಕಳ ಸೌಲಭ್ಯ ಗಳ ಉಪಯೋಗಕ್ಕಾಗಿ)ಗಳನ್ನು 
ಪಾಲಿಕೆ ವಿಶೇಷ ಆಯುಕ್ತ (ಆರೋಗ್ಯ) ರಂದೀಪ್ ರಿಗೆ ಮಂಗಳವಾರ ಹಸ್ತಾಂತರಿಸಿದರು.
 
ವೈದ್ಯಕೀಯ ಉಪಕರಣಗಳ ಹಸ್ತಾಂತರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂದೀಪ್, ಕೋವಿಡ್ ಸಮಯದಲ್ಲಿ ಡಾ.ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಪೀವರ್ ಕ್ಲೀನಿಕ್, ಟ್ರಯಾಜ್ ಸೆಂಟರ್ ಪ್ರಾರಂಭಿಸಲಾಗಿದೆ. ಅಲ್ಲದೆ ಇದೀಗ 30 ಹಾಸಿಗೆ ಸಾಮರ್ಥ್ಯದ ಮಕ್ಕಳ ಆರೈಕೆ ಕೇಂದ್ರವನ್ನು ಸ್ಥಾಪಿಸಿಸಲಾಗಿದೆ. ಅದರಲ್ಲಿ 2 ಐಸಿಯು ಹಾಸಿಗೆ, 8 ಹೆಚ್.ಡಿ.ಯು ಹಾಸಿಗೆ, 20 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆಯಿದ್ದು, ಸೌಮ್ಯ ಮತ್ತು ಮಧ್ಯಮ ಕೋವಿಡ್ ಸೋಂಕು ಲಕ್ಷಣಗಳಿರುವ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು.
 
ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಮಕ್ಕಳ ವೈದ್ಯರಿಗೆ ಇಂದಿರಾ ಗಾಂಧಿ ಆಸ್ಪತ್ರೆಯ ಮಕ್ಕಳ ತಜ್ಞರಿಂದ ಪಾಲಿಕೆಯ ಮಕ್ಕಳ ವೈದ್ಯರು, ನರ್ಸಿಂಗ್ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಆದ್ಯತೆ ಮೇರೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದು. ಗಂಭೀರ ಪರಿಣಾಮ ಬೀರಿದರೂ ಚಿಕಿತ್ಸೆ ನೀಡುವ ವ್ಯವಸ್ಥೆಯಿದ್ದು, ತುಂಬಾ ಗಂಭೀರವಾದಲ್ಲಿ ಉತ್ತಮ ಚಿಕಿತ್ಸೆ ವ್ಯವಸ್ಥೆಯಿರುವ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಹೇಳಿದರು.
 
ಡಾ. ಜಗಜೀವನ್ ರಾಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿ ಮತ್ತು ಒಳರೋಗಿ ಸೌಲಭ್ಯಳಿದ್ದು, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಇ.ಎನ್.ಟಿ, ನೇತ್ರ ಚಿಕಿತ್ಸೆ, ಮೂಳೆಚಿಕಿತ್ಸೆ, ದಂತ ಆರೈಕೆ, ಮಕ್ಕಳ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಾಗಿ ಸ್ಕ್ರೀನಿಂಗ್ ಸೌಲಭ್ಯವಿದೆ. ಹಾಗೂ ಎಕ್ಸ್-ರೇ ಘಟಕ ಮತ್ತು ರಕ್ತ ಶೇಖರಣಾ ಘಟಕವನ್ನೊಳಗೊಂಡ ಹೈಟೆಕ್ ಲ್ಯಾಬ್ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.
 
ಶಿಲ್ಪ ಸಿಂಗ್ ಮತ್ತು ಪಾರ್ಸಿಯಾ ಸಿಂಗ್  ಕೋವಿಡ್ ಚಿಕಿತ್ಸೆಗೆ ಅನುಕೂಲವಾಗುವ ದೃಷ್ಟಿಯಿಂದ ಡಾ. ಬಾಬು ಜಗಜೀವನ್ ರಾಮ ಸಾರ್ವಜನಿಕ ಆಸ್ಪತ್ರೆಗೆ 5 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನೀಡಿದ್ದು, ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
 
ವೈದ್ಯಕೀಯ ಉಪಕರಣಗಳ ಹಸ್ತಾಂತರದ ವಿವರ: 
 
1. ಬೈಪಾಸ್  ಯಂತ್ರ - 03
 
2.  ವಿಡಿಯೋ ಲಾರಿಂಗೋಸ್ಕೋಪ್(ಗಂಟಲಿನ ಗೂಡಿನಲ್ಲಿರುವ ದನಿಪೆಟ್ಟಿಗೆಯ ಒಳಭಾಗವನ್ನು ಪರೀಕ್ಷಿಸಲು ಉಪಯೋಗಿಸುವ ಕನ್ನಡಿಯನ್ನೊಳಗೊಂಡಿರುವ ಉಪಕರಣ) - 01
 
3. ಪಿಪಿಇ ಕಿಟ್‌ಗಳು - 300
 
4. ಸ್ಯಾನಿಟೈಸರ್ - 50 ಲೀಟರ್
 
ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
covid

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ