ತರಕಾರಿ ಮಾರುತ್ತಾ ಕಳ್ಳತನ ಮಾಡುತ್ತಿದ್ದವನ ಬಂಧನ
ಶನಿವಾರ, 19 ಜನವರಿ 2019 (20:55 IST)
ಆತ ತರಕಾರಿ ಮಾರಾಟ ಮಾಡುವ ನೆಪ ಮಾಡುತ್ತಿದ್ದ. ಮನೆಗಳಿಗೆ ಕನ್ನಹಾಕಿ ಕಳ್ಳತನ ಮಾಡುತ್ತಿದ್ದ. ಕೊನೆಗೂ ಚಾಲಾಕಿ ಕಳ್ಳ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುರುಬರಹಳ್ಳಿಯ ಮಂಜು ಅಲಿಯಾಸ್ ಪಾರಿವಾಳ ಮಂಜ (39) ಬಂಧಿತ ಆರೋಪಿ. ಬಂಧಿತನಿಂದ 8 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
ಹಳೆ ಕಳ್ಳನಾಗಿದ್ದ ಆರೋಪಿಯು ಹಿಂದೆ ಚಾಮರಾಜಪೇಟೆ, ಹುಳಿಮಾವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳವು ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲು ಶಿಕ್ಷೆ ಅನುಭವಿಸಿ, 8 ತಿಂಗಳ ಹಿಂದೆ ಬಿಡುಗಡೆಯಾಗಿ ಬಂದಿದ್ದ. ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಇನ್ನಿತರ ಕಡೆಗಳಲ್ಲಿ ಬೆಳಗಿನ ವೇಳೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತ, ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರ ಮಧ್ಯೆ ಜನಸಂದಣಿ ಕಡಿಮೆ ಇರುವುದನ್ನು ಗಮನಿಸಿ ಬೀಗ ಮುರಿದು ಕಳವು ಮಾಡುತ್ತಿದ್ದ.