ಪಾಕಿಸ್ತಾನಕ್ಕೆ ಆಹಾರ, ಔಷಧಿ ಒದಗಿಸಲು ಚಿಂತನೆ..!
ಪಾಕಿಸ್ತಾನದ ಜನರು ಪ್ರವಾಹದಿಂದ ನಲುಗಿದ್ದಾರೆ. ನನ್ನ ಹೃದಯ ಭಾರವಾಗಿದೆ. ಅಲ್ಲಿನ ಪರಿಸ್ಥಿತಿ ಶೀಘ್ರ ಸುಧಾರಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇತಿಹಾಸದ ಅತ್ಯಂತ ಭೀಕರ ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಪಾಕಿಸ್ತಾನದ ಬಗ್ಗೆ ಭಾರತ ಸರ್ಕಾರದ ಪರವಾಗಿ ಇದೇ ಮೊದಲ ಬಾರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಜನರ ನೋವಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಅಗತ್ಯ ಮಾನವೀಯ ನೆರವು ಒದಗಿಸಲು, ಪಾಕಿಸ್ತಾನದ ಅಗತ್ಯಗಳನ್ನು ಸರಿಯಾಗಿ ಗ್ರಹಿಸಿ ಸ್ಪಂದಿಸುವ ಉದ್ದೇಶದಿಂದ ಪಾಕ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಪ್ರವಾಹದಿಂದ ಈವರೆಗೆ 1,100 ಮಂದಿ ಮೃತಪಟ್ಟಿದ್ದು, ಸುಮಾರು 700 ಮನೆಗಳು ಹಾಳಾಗಿವೆ. ಗಾಯದ ಮೇಲೆ ಬರೆ ಎಳೆದಂತೆ ಪಾಕಿಸ್ತಾನವು ಈಗ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಪ್ರಧಾನಿ ಶೆಹ್ಬಾಜ್ ಷರೀಫ್ ಜಾಗತಿಕ ಸಮುದಾಯದ ನೆರವು ಕೋರಿದ್ದಾರೆ. ಪಾಕಿಸ್ತಾನದ ಸುಮಾರು 3.3 ಕೋಟಿ ಮಂದಿ ಪ್ರವಾಹದಿಂದಾಗಿ ಸ್ಥಳಾಂತರವಾಗಿದ್ದಾರೆ. ಒಟ್ಟು ಜನಸಂಖ್ಯೆಯ ಏಳನೇ ಒಂದು ಭಾಗ ಪ್ರವಾಹದಿಂದ ಹಾನಿ ಅನುಭವಿಸಿದೆ.