ಬಿಪಿಎಲ್ ಕಾರ್ಡ್ ರದ್ದತಿಯಲ್ಲಿ ಬಡವರಿಗೆ ಅನ್ಯಾಯವಾಗಲು ಸರ್ಕಾರದ ಈ ಒಂದು ತಪ್ಪು ಕಾರಣ

Krishnaveni K

ಶುಕ್ರವಾರ, 22 ನವೆಂಬರ್ 2024 (10:38 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಪ್ಯಾನ್ ಕಾರ್ಡನ್ನು ಆಧಾರವಾಗಿ ಇಟ್ಟುಕೊಂಡು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತಿದ್ದಾರೆ. ಬಿಪಿಎಲ್ 11.5 ಲಕ್ಷ ಕಾರ್ಡುಗಳನ್ನು ಏಕಾಏಕಿ ರದ್ದು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 10-15 ಲಕ್ಷ ಕಾರ್ಡ್‍ಗಳನ್ನು ರದ್ದು ಮಾಡಲಿದ್ದಾರೆ. ಪ್ಯಾನ್ ಕಾರ್ಡ್ ಎಂದರೆ ಬೀದಿ ಬದಿಯ ವ್ಯಾಪಾರಿಗಳು ಕೂಡ ಅದನ್ನು ಹೊಂದಿದ್ದಾರೆ. ಅದಿಲ್ಲದೆ ವ್ಯವಹಾರ ಆಗುವುದಿಲ್ಲ ಎಂದು ತಿಳಿಸಿದರು.

ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅಧಿಕಾರಿಗಳು ವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸಿಲ್ಲ. ಮುಂದಿನ 15-20 ದಿನಗಳಲ್ಲಿ ಏಕಾಏಕಿಯಾಗಿ 20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ, ಮುಖ್ಯಮಂತ್ರಿಗಳಿಗೆ ಸಾವಿರಾರು ಕೋಟಿ ಗೃಹಲಕ್ಷ್ಮಿ ಯೋಜನೆಯ ಹಣ ಉಳಿಯಲಿದೆ. ಮತ್ತೊಂದು ಕಡೆ ಬಿಪಿಎಲ್ ಕಾರ್ಡ್‍ಗೆ ಕೊಡುವ 5 ಕೆಜಿ ಅಕ್ಕಿಗೆ ಸಂಬಂಧಿಸಿ ಹಣ ಹಾಕುವುದೂ ಉಳಿಯಲಿದೆ ಎಂದು ಆರೋಪಿಸಿದರು.

ಗ್ಯಾರಂಟಿ, ಗ್ಯಾರಂಟಿ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದರು. ಆದರೆ, ಜನರು ಇವತ್ತು ಛೀ ಥೂ ಎಂದು ಉಗಿಯುವಂತಾಗಿದೆ. ಬಿಪಿಎಲ್ ಕಾರ್ಡ್ ಕೊಡಿ ಎಂದು ತಾಯಂದಿರು ಕಣ್ಣೀರು ಹಾಕುತ್ತಿದ್ದಾರೆ ಎಂದ ಅವರು, ಒಂದೆಡೆ ವಕ್ಫ್ ವಿಚಾರದಲ್ಲಿ ರೈತರಿಗೆ ಬರೆ ಎಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಸಚಿವರ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇದು ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಷರಾ ಬರೆಯುತ್ತಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ