ಕೆರೆಯಲ್ಲಿ ಸಿಲುಕಿದ್ದ ತಂಗಿಯನ್ನು ರಕ್ಷಿಸಲು ಧಾವಿಸಿದ ಅಕ್ಕ ಸೇರಿದಂತೆ ಮೂವರು ನೀರುಪಾಲು

Sampriya

ಸೋಮವಾರ, 17 ಮಾರ್ಚ್ 2025 (18:51 IST)
ದಾವಣಗೆರೆ: ಅಕ್ಕ-ತಂಗಿ ಸೇರಿ ಮೂವರು ಮಹಿಳೆಯರು ಕೆರೆಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಇಂದು ಚನ್ನಗಿರಿ ಬಳಿ ಸಂಭವಿಸಿದೆ.

ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.  30 ವರ್ಷದ ದೀಪಾರಾಣಿ, 26 ವರ್ಷದ ದಿವ್ಯಾ ಮತ್ತು 19 ವರ್ಷದ ಚಂದನಾ ಮೃತ ಮಹಿಳೆಯರು.

ಚನ್ನಗಿರಿ ಪಟ್ಟಣಕ್ಕೆ ಹೊಂದಿಕೊಂಡಿರುವ ಲಕ್ಷ್ಮಿಸಾಗರ-ದಿಗ್ಗೇನಹಳ್ಳಿ ಗ್ರಾಮದ ಮಧ್ಯೆ ಇರುವ ಹೊಸಕೆರೆಯಲ್ಲಿ ಬಟ್ಟೆ ತೊಳೆಯಲು ಅವರು ತೆರಳಿದ್ದರು. ಈ ವೇಳೆ ಚಂದನಾ ಈಜಲೆಂದು ಕೆರೆಗೆ ಇಳಿದಿದ್ದಾಳೆ.

ಕೆಸರಿನಲ್ಲಿ ಸಿಲುಕಿದ ಚಂದನಾಳನ್ನು ಕಾಪಾಡಲು ನೀರಿಗೆ ಇಳಿದ ಅಕ್ಕ ದಿವ್ಯಾ ಅವರೂ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಇಬ್ಬರನ್ನು ರಕ್ಷಿಸಲು ಮುಂದಾದ ದೀಪಾರಾಣಿಯೂ ಸಾವನ್ನಪ್ಪಿದ್ದಾರೆ. ದೀಪಾರಾಣಿ ನೆರೆಹೊರೆಯ ನಿವಾಸಿಯಾಗಿದ್ದಾರೆ.

ದೀಪಾರಾಣಿ ಮತ್ತು ದಿವ್ಯಾ ಅವರಿಗೆ ವಿವಾಹವಾಗಿದೆ. ದೀಪಾರಾಣಿಗೆ ಮೂವರು ಮಕ್ಕಳಿದ್ದರೆ, ದಿವ್ಯಾಗೆ ಒಂದು ವರ್ಷದ ಮಗುವಿದೆ. ಚಂದನಾ ಅವಿವಾಹಿತೆಯಾಗಿದ್ದಾರೆ. ಮೃತರ ಕುಟುಂಬದವರ ರೋಧನ ಮುಗಿಲು ಮುಟ್ಟಿದೆ.

ಚನ್ನಗಿರಿ ಅಗ್ನಿಶಾಮಕ ದಳದ ಕುಮಾರ್ ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿ ಮೂವರ ಶವಗಳನ್ನು ಮೇಲೆಕ್ಕೆ ಎತ್ತಿದ್ದಾರೆ. ತಹಶೀಲ್ದಾರ್ ಎನ್.ಜೆ. ನಾಗರಾಜ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ. ರವೀಶ್ ಸ್ಥಳ ಪರಿಶೀಲನೆ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ