ಕಾರ್ಯನಿರತ ಪತ್ರಕರ್ತರ ಸಂಘದ ಕಳ್ಳಾಟಕ್ಕೆ ಬಿತ್ತು ಬ್ರೇಕ್!

ಮಂಗಳವಾರ, 9 ನವೆಂಬರ್ 2021 (21:08 IST)
ಅಕ್ರಮ ಚುನಾವಣೆಗೆ ಹೈಕೋರ್ಟ್ ಕಡಿವಾಣ; ಕಾರ್ಮಿಕ ಇಲಾಖೆ ಕಾಯ್ದೆಯಡಿ ಚುನಾವಣೆಗೆ ಖಡಕ್ ಆದೇಶ.
 
ಬೆಂಗಳೂರು -: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚುನಾವಣೆ ಹೆಸರಲ್ಲಿ ನಡೆಸುತ್ತಿದ್ದ ಕಳ್ಳಾಟಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಬ್ರೇಕ್ ಹಾಕಿ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.
ರಾಯಚೂರು ನಾಗರಾಜ್, ಶಿವಮೊಗ್ಗ ಮಂಜುನಾಥ್ ಹಾಗೂ ವೆಂಕಟ್ ಸಿಂಗ್ ಎಂಬ ಮೂವರು ಪತ್ರಕರ್ತರು, ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಅಕ್ರಮದ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. 
ವಿಚಾರಣೆ ಕೈಗೆತ್ತಿಕೊಂಡ ರಾಜ್ಯ ಉಚ್ಚ ನ್ಯಾಯಾಲಯವೂ, ಪ್ರಕರಣದ ಪರ-ವಿರೋಧ ವಾದ ಆಲಿಸಿ ಇಂದು ಮಹತ್ವದ ಅಂತಿಮ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಮಿಕ ಇಲಾಖೆ ಕಾಯ್ದೆಯಡಿ ನೋಂದಣಿಯಾಗಿರುವ ಸಂಘಟನೆಯಾಗಿದೆ. ಕಾರ್ಮಿಕ ಇಲಾಖೆ ಕಾಯ್ದೆಯನ್ವಯ ಸಂಘಟನೆ ಮತ್ತು ಚುನಾವಣೆ ನಡೆಸಬೇಕಾದ ಸಂಘವೂ, ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾನೂನುಬಾಹೀರವಾಗಿ ಸಂಘಟನೆ, ಚುನಾವಣೆ ಮಾಡಿತ್ತು.
ಚುನಾವಣೆ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನ ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸದೆ, ತಮಗೆ ಬೇಕಾದ ಸದಸ್ಯರನ್ನೇ ಚುನಾವಣಾಧಿಕಾರಿಯಾಗಿ ನೇಮಿಸಿಕೊಂಡು ಅಕ್ರಮ ಚುನಾವಣೆ ನಡೆಸಿಕೊಂಡು ಬಂದಿತ್ತು.
ಇದಕ್ಕೆ ಉದಾಹರಣೆ ಎಂಬಂತೆ ಕಳೆದ ಚುನಾವಣೆಯಲ್ಲಿ ಅಂದರೆ ಪ್ರಸಕ್ತ ಆಡಳಿತ ಮಂಡಳಿ ನೇಮಕವಾದ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದವು. ಮಂಡ್ಯದ ಪಿ.ಜೆ.ಚೈತನ್ಯ ಕುಮಾರ್ ಎಂಬ ಸದಸ್ಯರೊಬ್ಬರನ್ನ ರಾಜ್ಯ ಚುನಾವಣಾಧಿಯಾಗಿ ನೇಮಿಸಿ, ಚುನಾವಣೆ ಬಳಿಕ ಅದೇ ವ್ಯಕ್ತಿಯನ್ನ ರಾಷ್ಟ್ರೀಯ ಮಂಡಳಿ ಸದಸ್ಯರನ್ನಾಗಿ ನೇಮಿಸಿತ್ತು.
ಜೊತೆಗೆ ಕಾರ್ಮಿಕ ಇಲಾಖೆ ಕಾಯ್ದೆಯಡಿ 60 ವರ್ಷ ಮೇಲ್ಪಟ್ಟವರು ಹಾಗೂ ಪತ್ರಿಕೆಗಳ ಮಾಲೀಕರು ಸಂಘದ ಸದಸ್ಯರಾಗುವಂತಿಲ್ಲ ಎಂಬ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಸದಸ್ಯತ್ವ ನೀಡಿಕೊಂಡು ಬಂದಿತ್ತು.
ಈ ಎಲ್ಲದರ ಬಗ್ಗೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಇಂದು ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಡೆಗೆ ಅಸಮಾಧಾನ ಹೊರಹಾಕಿದ್ದು, ಮುಂದಿನ ಎಲ್ಲಾ ಚುನಾವಣೆಗಳನ್ನ ಕೇಂದ್ರ ಮತ್ತು ಜಿಲ್ಲಾ ಮಟ್ಟದಲ್ಲಿ ಆಯಾಯ ಕಾರ್ಮಿಕ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಕಾನೂನು ಬದ್ಧವಾಗಿ ನಡೆಸಬೇಕು. ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಕ್ರಮವಹಿಸಬೇಕು ಎಂದು ಆದೇಶ ಹೊರಡಿಸಿ, ಖಡಕ್ ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ