ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಪಂಜಿನ ಮೆರವಣಿಗೆ ನಡೆಸಲಾಗಿದೆ.
ಬೆಂಗಳೂರು ಹೊರವಲಯ ಜಿಗಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಜಿಗಣಿಯ ಡಬಲ್ ರೋಡ್ ರಸ್ತೆಯಿಂದ ಎಪಿಸಿ ಸರ್ಕಲ್ ವರೆಗೆ ನೂರಾರು ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಪಂಜಿನ ಮೆರೆವಣಿಗೆ ಮಾಡಿದ್ರು.
ಆ ಮೂಲಕ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಒಂದು ಗಂಟೆಗಳ ಕಾಲ ಜಿಗಣಿಯಲ್ಲಿ ವಾಹನ ದಟ್ಟಣೆಯಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕಾಂಗ್ರೆಸ್ ಮುಖಂಡರು ಮಾತನಾಡಿ, ಕೇದ್ರ ಸರ್ಕಾರ ದ್ವೇಷ ರಾಜಕಾರಣವನ್ನು ಮಾಡುತ್ತಿದೆ. ಡಿಕೆಶಿ ಅವರು ಈಗಾಗಲೇ ಹಣವನ್ನು ವ್ಯವಹಾರದಿಂದ ಸಂಪಾದನೆ ಮಾಡಿರುವುದು. ಅದನ್ನು ಇಲ್ಲ ಸಲ್ಲದ ಹಾಗೆ ಬಿಂಬಿಸಿ ಡಿಕೆಶಿ ಅವರ ಮಗಳಿಗೆ ನೋಟಿಸ್ ಕಳುಹಿಸಿರುವುದು ನಾಚಿಕೆಗೇಡಿನ ಕೆಲಸ. ಶರ್ಮಾ ಟ್ರಾವೆಲ್ಸ್ ಅವರು ನಮಗೆ ಸೇರಿದ್ದು ಎಂದು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಡಿಕೆಶಿ ಅವರ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.