ಟೋಯಿಂಗ್ ಕಿರಿಕ್ ಬಗ್ಗೆ ಅಧಿಕಾರಿಗಳಿಗೆ ಪಾಠ

ಮಂಗಳವಾರ, 1 ಫೆಬ್ರವರಿ 2022 (14:07 IST)
ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ವಾಹನಗಳ ಟೋಯಿಂಗ್ ವಿಚಾರ ಸಂಬಂಧ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಅವರು ಸೋಮವಾರ ಸಂಚಾರ ವಿಭಾಗದ ಪೊಲೀಸರ ಸಭೆ ನಡೆಸಿ, ಕರ್ತವ್ಯ ನಿರ್ವಹಣೆ ವೇಳೆ ಸಾರ್ವಜನಿಕರು ಹಾಗೂ ವಾಹನ ಸವಾರರೊಂದಿಗೆ ವರ್ತನೆ ಹೇಗಿರಬೇಕು ಎಂಬುದರ ಬಗ್ಗೆ ಪಾಠ ಮಾಡಿದರು.
ಸಭೆಯಲ್ಲಿ ಪೊಲೀಸರಿಗೆ ಪಾಠ ಮಾಡಿದ ಅಧಿಕಾರಿಗಳು, ವಾಹನಗಳ ತೆರವಿಗೂ ಮುನ್ನ ಸವಾರರಿಗೆ 5 ನಿಮಿಷ ಕಾಲಾವಕಾಶ ಕೊಡಬೇಕು. ಈ 5 ನಿಮಿಷಗಳ ಸಮಯದಲ್ಲಿ ಸಿಬ್ಬಂದಿಗಳು ವಾಹನದ ಸಂಖ್ಯೆಯನ್ನು ಮೈಕ್ ನಲ್ಲಿ ತಿಳಿಸಿ, ಮಾಲೀಕರಿಗೆ ದೂರವಾಣಿ ಕರೆ ಮಾಡಬೇಕು. ಕರೆ ಮಾಡಿ ನಿಯಮ ಉಲ್ಲಂಘನೆ ಬಗ್ಗೆ ತಿಳಿಸಬೇಕು. ನಿಯಮ ಉಲ್ಲಂಘನೆ ಸ್ಪಷ್ಟವಾಗಿದ್ದರೆ ಮಾತ್ರ ಸ್ಥಳದಲ್ಲಿಯೇ ದಂಡ ವಿಧಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
 
ಕಳೆದ 2-3 ದಿನದಲ್ಲಿ ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಎರಡು ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆಗಳ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಸಮಾಧಾನ ವ್ಯಕ್ತಪಡಿಸಿ, ತನಿಖೆಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೊಲೀಸರೊಂದಿಗೆ ಸಭೆ ನಡೆಸಿ, ಮಾತುಕತೆ ನಡೆಸಿದ್ದಾರೆ.
 
ಈ ನಡುವೆ ಜೀವನಭೀಮಾ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೋಯಿಂಗ್ ವಾಹನದ ಹಿಂದೆ ವ್ಯಕ್ತಿಯೊಬ್ಬ ಓಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ಅಪ್ ಲೋಡ್ ಮಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
 
ವಾಹನವನ್ನು ತೆರವುಗೊಳಿಸುವುದಕ್ಕೂ ಮುನ್ನ ಪೊಲೀಸರು ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದ್ದು, ದಂಡವನ್ನು ಸಂಗ್ರಹಿಸದೆ ಡೆಲಿವರಿ ಬಾಯ್'ಗೆ ವಾಹನವನ್ನು ಹಿಂತಿರುಗಿಸಿದ್ದಾರೆಂದು ತನಿಖೆ ವೇಳೆ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಉದ್ದೇಶ ಪೂರ್ವಕವಾಗಿ ತಿರುಚಿದ ವಿಡಿಯೋವನ್ನು ಹರಿಬಿಡಲಾಗಿದ್ದು, ವಿಡಿಯೋ ಹರಿಬಿಟ್ಟ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ