ನಮ್ಮ ಮೆಟ್ರೋದಲ್ಲಿ ಹೆಣ್ಮಕ್ಳನ್ನೂ ಮೀರಿಸುವಂತೆ ಕಿತ್ತಾಡಿದ ಯುವಕರು

Krishnaveni K

ಗುರುವಾರ, 11 ಜುಲೈ 2024 (10:23 IST)
ಬೆಂಗಳೂರು: ಬಿಎಂಟಿಸಿ ಅಥವಾ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರು ಸೀಟ್ ಗಾಗಿ ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಅನೇಕ ಘಟನೆಗಳನ್ನು ನೋಡಿದ್ದೇವೆ. ಆದರೆ ಅದನ್ನೂ ಮೀರಿಸುವಂತೆ ನಮ್ಮ ಮೆಟ್ರೋದಲ್ಲಿ ಇಬ್ಬರು ಯುವಕರು ಕಿತ್ತಾಡಿಕೊಂಡಿದ್ದಾರೆ.

ಬಹುಶಃ ಜುಟ್ಟು ಇದ್ದಿದ್ದರೆ ಈ ಯುವಕರೂ ಜುಟ್ಟೇ ಹಿಡಿದುಕೊಂಡು ಕಿತ್ತಾಡುತ್ತಿದ್ದರೇನೋ. ಆದರೆ ಅದಿಲ್ಲವಲ್ಲಾ? ಅದಕ್ಕೇ ಮುಖ ಮೂತಿ ನೋಡದೇ ಪರಸ್ಪರ ಚಚ್ಚಿ, ತಳ್ಳಿಕೊಂಡು ಕಚ್ಚಾಡಿದ್ದಾರೆ. ಜೊತೆಗೆ ಜೋರಾಗಿ ಕಿರುಚಿಕೊಂಡು ಜಗಳವಾಡಿದ್ದಾರೆ. ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಬ್ಬರು ಯುವಕರು ಯಾವುದೋ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಮೆಟ್ರೋ ಕೂಡಾ ಜನರಿಂದ ತುಂಬಿ ಹೋಗಿತ್ತು. ಇಬ್ಬರೂ ಯುವಕರು ಅಕ್ಕಪಕ್ಕದಲ್ಲೇ ನಿಂತಿದ್ದರು. ಆದರೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಮುಖಕ್ಕೆ ಗುದ್ದಿಕೊಂಡು ಇಬ್ಬರೂ ಜಗಳವಾಡಿದ್ದಾರೆ.

ಇವರಿಬ್ಬರ ಕಿತ್ತಾಟ ನೋಡಿ ಅಕ್ಕಪಕ್ಕದಲ್ಲಿ ನಿಂತಿದ್ದ ಪ್ರಯಾಣಿಕರು ಇಬ್ಬರನ್ನೂ ಬೇರ್ಪಡಿಸಿ ಬೈದು ಬುದ್ಧಿ ಹೇಳಿದ್ದಾರೆ. ಸಾಮಾನ್ಯವಾಗಿ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಇತ್ತೀಚೆಗೆ ಸರ್ಕಾರ ಮಹಿಳೆಯರಿಗೆ ಫ್ರೀ ಟಿಕೆಟ್ ಘೋಷಿಸಿದ ಮೇಲಂತೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿ ಸಾಮಾನ್ಯವಾಗಿ ಸುಶಿಕ್ಷಿತರೇ ಪ್ರಯಾಣಿಸುವ ನಮ್ಮ ಮೆಟ್ರೋದಲ್ಲೇ ಇಂತಹ ಘಟನೆ ನಡೆದಿರುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ