ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಬಂಧನಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಿನ್ನೆ ನಾಗೇಂದ್ರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ತಮ್ಮ ಆಪ್ತರ ಮೂಲಕ ನಾಗೇಂದ್ರ ಹವಾಲ ರೂಪದಲ್ಲಿ ಹಣ ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ. ಮಾಜಿ ಸಚಿವ ನಾಗೇಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ. ನಾಗೇಂದ್ರ ಪರವಾಗಿ ಅವರ ಸಹಾಯಕ ಹವಾಲ ರೂಪದಲ್ಲಿ 50 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ಪಡೆದಿದ್ದಾರೆಂಬ ಆರೋಪವಿದೆ. ನಾಗೇಂದ್ರ ಆಪ್ತ ಹರೀಶ್ ಎಂಬಾತ ನಿಗಮದ ಮೇಲೆ ಒತ್ತಡ ಹಾಕಿ 25 ಲಕ್ಷ ರೂ. ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನಲೆಯಲ್ಲಿ ನಿನ್ನೆ ಇಡಿ ಅಧಿಕಾರಿಗಳು ಮಾಜಿ ಸಚಿವರ ಮನೆಗಳ ಮೇಲೆ ದಾಳಿ ನಡೆಸಿದ್ದರು. ನಾಗೇಂದ್ರ ಪರವಾಗಿ ಸಹಾಯಕರು ಹಣ ಪಡೆದಿದ್ದ ಬಗ್ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಬಂಧಿಸಲು ಸಿದ್ಧತೆ ನಡೆದಿದೆ. ನಿನ್ನೆ ನಾಗೇಂದ್ರ ಆಪ್ತನನ್ನು ಬಂಧಿಸಲಾಗಿತ್ತು.
ಇಂದು ಎಸ್ ಐಟಿ ಮುಂದೆ ತನಿಖೆಗೆ ಹಾಜರಾಗಲು ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ನಿನ್ನೆಯೇ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನಿನ್ನೆ ಸಾಧ್ಯವಾಗದ ಕಾರಣ ಇಂದು 11 ಗಂಟೆಗೆ ವಿಚಾರಣೆಗೆ ಹಾಜಗಾರಲು ಸೂಚಿಸಲಾಗಿದೆ.