ಕರಿಕೋಟು ಧರಿಸಿ ಮತ್ತೆ ವಕೀಲ ವೃತ್ತಿಯ ಕಡೆಗೆ ಮುಖ ಮಾಡಿದ ವೀರಪ್ಪ ಮೊಯ್ಲಿ
ಮಂಗಳವಾರ, 25 ಜೂನ್ 2019 (11:04 IST)
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಇದೀಗ ಮತ್ತೆ ವಕೀಲ ವೃತ್ತಿ ಶುರುಮಾಡುವುದರ ಮೂಲಕ, ರಾಜಕೀಯಕ್ಕೆ ವಿಧಾಯ ಹೇಳಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.
ಸೋಮವಾರ ವೀರಪ್ಪ ಮೊಯ್ಲಿ ಅವರು ಕಪ್ಪು ಕೋಟು ಧರಿಸಿ ಹೈಕೋರ್ಟ್ ಗೆ ಆಗಮಿಸಿ, 2004 ರ ಪ್ರಕರಣವೊಂದರ ವಾದ ಮಂಡಿಸಿದ್ದಾರೆ. ಅಲ್ಲದೇ ಅವರು ವಕೀಲರಾದ ಬಿ.ವಿ. ಆಚಾರ್ಯ, ಡಿಎಲ್‌ಎನ್ ರಾವ್, ರವೀಂದ್ರನಾಥ್ ಕಾಮತ್ ಅವರೊಂದಿಗೆ ಕೆಲಕಾಲ ವಕೀಲರ ಸಭಾಂಗಣದಲ್ಲಿ ಮಾತುಕತೆ ನಡೆಸಿದ್ದು, ವಕೀಲ ವೃತ್ತಿಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ರಾಜಕಾರಣದಿಂದಾಗಿ ಇಷ್ಟು ದಿನ ವಕೀಲ ವೃತ್ತಿಯಿಂದ ದೂರವಿದ್ದೆ. ಈಗ ವಕೀಲ ವೃತ್ತಿ ಮುಂದುವರಿಸಲು ನಿರ್ಧರಿಸಿದ್ದೇನೆ. ಜೊತೆಗೆ ರಾಜಕಾರಣದಲ್ಲಿಯೂ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ.