ವಿಡಿಯೋ; ಎಐಎಂಐಎಂ ಕರ್ನಾಟಕದ ತಾಲಿಬಾನಿಗಳು; ಸಿ. ಟಿ. ರವಿ

ಬುಧವಾರ, 1 ಸೆಪ್ಟಂಬರ್ 2021 (11:06 IST)
ಕಲಬುರಗಿ : "ತಾಲಿಬಾನಿ, ಎಐಎಂಐಎಂ ಮತ್ತು ಎಸ್ಡಿಪಿಐ ಉದ್ದೇಶ ಒಂದೇ. ಎಐಎಂಐಎಂ ಕರ್ನಾಟಕದ ತಾಲಿಬಾನಿಗಳು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದರು.

ಮಂಗಳವಾರ ಕಲಬುರಗಿಯಲ್ಲಿ ಮಾತನಾಡಿದ ಸಿ. ಟಿ. ರವಿ, "ತಾಲಿಬಾನಿಗಳನ್ನು ಕಲಬುರಗಿಯ ಜನರು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದರು. ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್ಗಳಿಗೆ ಸೆಪ್ಟೆಂಬರ್ 3ರ ಶುಕ್ರವಾರ ಚುನಾವಣೆ ನಡೆಯಲಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಎಐಎಂಐಎಂ ಬೆಂಬಲಿತ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಸಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಲಬುರಗಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಮಂಗಳವಾರ ಈ ಕುರಿತು ಸಿ. ಟಿ. ರವಿಯನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ "ಎಐಎಂಐಎಂ ಕರ್ನಾಟಕದ ತಾಲಿಬಾನಿಗಳು" ಎಂದು ಸಿ. ಟಿ. ರವಿ ಹೇಳಿಕೆ ಕೊಟ್ಟರು.
ಸಿ. ಟಿ. ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, "ಅವರು ಮಗುವಿನಂತೆ ಮತ್ತು ಅಂತರಾಷ್ಟ್ರೀಯ ರಾಜಕೀಯದ ಬಗ್ಗೆ ಏನೂ ತಿಳಿದಿಲ್ಲ. ಬಿಜೆಪಿ ಯುಎಪಿಎ ಕಾಯ್ದೆಯಡಿ ತಾಲಿಬಾನ್ ನಿಷೇಧ ಮಾಡಲಿದೆಯೇ?" ಎಂದು ಸವಾಲು ಹಾಕಿದರು.
ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಿ. ಟಿ. ರವಿ, "ಹಿಂದೂಗಳು ಹೆಚ್ಚಾಗಿರುವ ತನಕ ಮಾತ್ರ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪ ಸಂಖ್ಯಾತರಾದರೆ ಗಾಂಧರ ಕಾಲದ ಸ್ಥಿತಿ ಬರುತ್ತದೆ" ಎಂದು ಹೇಳಿದ್ದರು.
"ನಮ್ಮ ಮೂಲ ನಂಬಿಕೆಯಲ್ಲೇ ಸಮಭಾವವಿದೆ. ಸಮಭಾವ ಹೊಂದಿರುವ ಜನರು ಬಹುಸಂಖ್ಯಾತರಾಗಿದ್ದಾಗ ಸಮಾನತೆ ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾನದ ಪರಿಸ್ಥಿತಿ ನಮಗೂ ಬರುತ್ತದೆ" ಎಂದು ಹೇಳಿದ್ದರು.
"ಡಿಕೆ ಸಹೋದರರಿಂದ ಬುದ್ಧನ ಮೂರ್ತಿಗಳು ಹಾಳಾಗುತ್ತವೆ. ಓಲೈಕೆ ರಾಜಕಾರಣದಿಂದ ಇನ್ನಷ್ಟು ಪಾಕಿಸ್ತಾನ ಸೃಷ್ಟಿಯಾಗುತ್ತದೆ. ದೇಶ ಮೊದಲು ಅನ್ನೋ ತತ್ವದ ಮೇಲೆ ರಾಜಕಾರಣ ಮಾಡಿ. ಆದರೆ ಕಾಂಗ್ರೆಸ್ ಪಕ್ಷ ಮೊದಲು ಅನ್ನೋ ತತ್ವ ಮರೆತಿದೆ" ಎಂದು ಸಿ. ಟಿ. ರವಿ ವಾಗ್ದಾಳಿ ನಡೆಸಿದ್ದರು.
"ಸಿದ್ದರಾಮಯ್ಯ ವಿಶ್ರಾಂತಿಗೆ ಹೋದಾಗ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಗೆಲ್ಲಬಾರದು ಎಂಬ ಸಂದೇಶವನ್ನು ಅವರು ರವಾನೆ ಮಾಡುತ್ತಾರೆ. ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಹಿಂಬಾಲಕರ ಮೂಲಕ ಸಿದ್ದರಾಮಯ್ಯ ಸಂದೇಶ ನೀಡುತ್ತಾರೆ. ಸಿದ್ದರಾಮಯ್ಯ ಅಪೇಕ್ಷೆಯನ್ನು ಜನರು ಈಡೇರಿಸಲಿದ್ದಾರೆ" ಎಂದು ಸಿ. ಟಿ. ರವಿ ವ್ಯಂಗ್ಯವಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ