ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಜತೆಗೆ ಮೈತ್ರಿ ಮುಂದುವರೆಸಿದ ಬಿಜೆಪಿ 5 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪ್ರಕಟಿಸಿದೆ. 5 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ತನ್ನದೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.
ಅದರಂತೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವೈ.ಎ.ನಾರಾಯಣಸ್ವಾಮಿ ಟಿಕೆಟ್ ನೀಡಲಾಗಿದೆ.
ಈಶಾನ್ಯ ಪದವೀಧರ ಕ್ಷೇತ್ರದಿಂದ ಅಮರನಾಥ ಪಾಟೀಲ್, ನೈರುತ್ಯ ಪದವೀಧರ ಕ್ಷೇತ್ರದಿಂದ ಡಾ. ಧನಂಜಯ್ ಸರ್ಜಿ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇ.ಸಿ.ನಿಂಗರಾಜುಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ಉಳಿದ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಕ್ಷೇತ್ರದಿಂದ ಮೇಲ್ಮನೆ ಹಾಲಿ ಸದಸ್ಯ ಎಸ್.ಎಲ್.ಭೋಜೇಗೌಡ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದ್ದು, ಇದುವರೆಗೂ ಘೋಷಣೆ ಮಾಡಿಲ್ಲ.
ವಿಧಾನಪರಿಷತ್ ಚುನಾವಣೆ ಜೂ.3 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೇ 16 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನವಾಗಿದೆ. ಮೇ 17 ನಾಮಪತ್ರ ಪರಿಶೀಲನೆ, ಮೇ 20 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಜೂ.6 ರಂದು ಮತ ಎಣಿಕೆ ನಡೆಯಲಿದೆ.