ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಆಯ್ಕೆಯಾಗಿ ಮಿಂಚಿನ ಸಂಚಲನಕ್ಕೆ ಕಾರಣವಾಗಿರುವ ಬಿವೈ ವಿಜಯೇಂದ್ರ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯುತ್ತಿದೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಇನ್ನು ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ಗಳು ಮಿಂಚುತ್ತಿವೆ. ಅಲ್ಲದೇ ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಕಮಲಪಾಳಯದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.