ಚೆನ್ನೈ: ಮಕ್ಕಳು ಅರೆ ಕ್ಷಣ ಕಣ್ಣು ತಪ್ಪಿದರೂ ಏನಾದರೂ ಒಂದು ಅನಾಹುತ ಮಾಡಿಕೊಂಡು ಬಿಡುತ್ತವೆ. ಚಿಕ್ಕಮಗುವೊಂದನ್ನು ಅಪಾರ್ಟ್ ಮೆಂಟ್ ನಲ್ಲಿ ರಕ್ಷಿಸುತ್ತಿರುವ ಈ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಪೋಷಕರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಅದರಲ್ಲೂ ಬಹುಮಹಡಿ ಕಟ್ಟಗಳಲ್ಲಿ ವಾಸಿಸುವವರು, ಅಪಾಯಕಾರಿ ಬಾಲ್ಕನಿ ಹೊಂದಿದ್ದರೆ ಪುಟಾಣಿ ಮಕ್ಕಳನ್ನು ಮೈ ಎಲ್ಲಾ ಕಣ್ಣಾಗಿಸಿ ನೋಡಿಕೊಳ್ಳಬೇಕಾಗುತ್ತದೆ.
ತಮಿಳುನಾಡಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಪೋಷಕರ ಅಜಾಗರೂಕತೆಯಿಂದ ಮಗುವೊಂದು ಅಪಾರ್ಟ್ ಮೆಂಟ್ ನ ರೂಫ್ ನಲ್ಲಿ ಸಿಲುಕಿ ಹಾಕಿಕೊಂಡಿದೆ. ಇನ್ನೂ ಅಂಬೆಗಾಲಿಡುವ ಮಗು. ಇಳಿಜಾರಿನಲ್ಲಿ ಸ್ವಲ್ಪ ಆಯತಪ್ಪಿದರೂ ಮಗು ಕೆಳಕ್ಕೆ ಬೀಳುತ್ತಿತ್ತು. ಅದೇನು ಪವಾಡವೋ ಮಗು ಅಳುತ್ತಿದ್ದರೂ ತನ್ನ ಕೈ ಬಿಡದೇ ಗಟ್ಟಿಯಾಗಿ ರೂಫ್ ಹಿಡಿದುಕೊಂಡು ಮಲಗಿತ್ತು.
ನೆರೆಹೊರೆಯವರು ಕೆಳಗೆ ಕೈ ಸಿಕ್ಕ ಬಟ್ಟೆಯನ್ನೆಲ್ಲಾ ಹಿಡಿದು ಮಗು ಕೆಳಕ್ಕೆ ಬಿದ್ದರೆ ಏಟಾಗದಂತೆ ಎಚ್ಚರಿಕೆ ವಹಿಸಿದ್ದರು. ಇನ್ನೊಂದೆಡೆ ಮೆತ್ತಗೆ ಬಾಲ್ಕನಿಯಿಂದ ಇಬ್ಬರು ಹತ್ತಿ ಮಗುವನ್ನು ಒಂದೇ ಕೈಯಲ್ಲಿ ಹಿಡಿದು ಸುರಕ್ಷಿತವಾಗಿ ಒಳಗೆ ಕರೆದುಕೊಳ್ಳುತ್ತಾರೆ. ಈ ರೋಚಕ ದೃಶ್ಯವನ್ನು ಅಕ್ಕಪಕ್ಕದವರೆಲ್ಲಾ ಜೀವ ಕೈಯಲ್ಲಿ ಹಿಡಿದುಕೊಂಡು ನೋಡುತ್ತಿರುತ್ತಾರೆ. ಇಂತಹದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.