ವೃತ್ತಿ ಜೀವನವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಬಳಿಕ ಮುಂದುವರೆಸಲು ಇಚ್ಛಿಸುವ ಮಹಿಳೆಯರಿಗಾಗಿಯೇ ವಿಎಂ ವೇರ್ ವಿಮೆನ್‌ಕ್ಲೂಷನ್ ಕಾರ್ಯಕ್ರಮವನ್ನು ಪರಿಚಯಿಸಿದ್ದು, ಇದು ಮಹಿಳೆಯರ ವೃತ್ತಿ ಜೀವನವನ್ನು ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕರಿಸುತ್ತದೆ ಎಂದು ವಿ.ಎಂ. ವೇರ್ ಇಂಜಿನಿಯರಿಂಗ್‌ನ ಗ್ಲೋಬಲ್ ಮುಖ್ಯಸ್ಥೆ ರೂಪ ರಾಜ್ ತಿಳಿಸಿದರು.
ವಿಎಂ ವೇರ್ ಸಂಸ್ಥೆಯು ಆಯೋಜಿಸಿದ್ಧ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಕಷ್ಟು ಮಹಿಳೆಯರು ಮದುವೆ ಬಳಿಕ ಅಥವಾ ಇತರೆ ಕಾರಣದಿಂದ ತಮ್ಮ ವೃತ್ತಿ ಬದುಕನ್ನು ಅರ್ಧಕ್ಕೆ ಮೊಟಕುಗೊಳಿಸಿ, ಪುನಃ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಲು ಇಚ್ಚಿಸುವ ಮಹಿಳೆಯರಿಗೆ ನಮ್ಮ ಸಂಸ್ಥೆಯು ಉಚಿತವಾಗಿ ವೃತ್ತಿ ತರಬೇತಿ ನೀಡುತ್ತಿದೆ. ಈಗಾಗಲೇ 22 ಸಾವಿರಕ್ಕೂ ಹೆಚ್ಚು ನೋಂದಣಿಯಾಗಿರುವುದು ವಿಶೇಷ ಎಂದರು.
2019ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಸಾಕಷ್ಟು ಮಹಿಳೆಯರ ವೃತ್ತಿ ಬದುಕನ್ನೇ ಬದಲಾಯಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಡೇಟಾಸೆಂಟರ್, ನೆಟ್‌ವರ್ಕಿಂಗ್, ಕ್ಲೌಡ್ ಮತ್ತು ಕ್ಲೌಡ್ ಮ್ಯಾನೇಜ್‌ಮೆಂಟ್ ತಂತ್ರಜ್ಞಾನಗಳು ಸೇರಿದಂತೆ ಕ್ಲೌಡ್ ತಂತ್ರಜ್ಞಾನಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳ ತರಬೇತಿಯನ್ನು ನೀಡಲಾಗುತ್ತದೆ. ಈಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಹಾಗೂ ಈಗಾಗಲೇ ಉದ್ಯೋಗ ಪಡೆದು, ಕೆಲ ಕಾರಣದಿಂದ ಉದ್ಯೋಗ ತ್ಯಜಿಸಿ, ಈಗ ಮತ್ತೆ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವ ಮಹಿಳೆಯರಿಗೆ ಈ ತರಬೇತಿ ನೀಡಲಾಗುತ್ತದೆ. ಈ ತರಬೇತಿಯೂ ಸಂಪೂರ್ಣ ಉಚಿತವಾಗಿದ್ದು, ಆನ್‌ಲೈನ್ ಮೂಲಕವೇ ಇದಕ್ಕೆ ನೋಂದಣಿಯಾಗಬಹುದು. ಈ ತರಬೇತಿಯು ಕನಿಷ್ಠ 4 ರಿಂದ 6 ತಿಂಗಳ ಅವಧಿಯಾಗಿದ್ದು, ತರಬೇತಿ ಪಡೆದ ಬಳಿಕ ಈ ಸಂಸ್ಥೆಯು ರಾಜ್ಯ ಸರ್ಕಾರದ ಅಧಿಕೃತ ಸರ್ಟಿಫಿಕೇಟ್ ನೀಡಲಿದೆ.
ವಿಎಂ ವೇರ್‌ನ ಎಂ.ಡಿ., ರಾಜ್‌ಕುಮಾರ್ ನಾರಾಯಣ್ ಮಾತನಾಡಿ, ಕೋರ್ಸ್‌ನನ್ನು ಮೂರು ಹಂತದಲ್ಲಿ ವಿಂಗಡಿಸಲಾಗಿದೆ. ಈಗಾಗಲೇ ಕೆಲಸದ ಅನುಭವ ಇರುವವರಿಗೆ ತಮ್ಮ ವೃತ್ತಿಯನ್ನು ಉನ್ನತೀಕರಿಸಿಕೊಳ್ಳುವವರಿಗೆ ಮಧ್ಯಮದ ಹಂತದ ತರಬೇತಿ, ಈಗಷ್ಟೇ ಉದ್ಯೋಗ ಪ್ರಾರಂಭಿಸುವವರಿಗೆ ನೂತನವಾಗಿ ತರಬೇತಿ ಹಾಗೂ ಈಗಾಗಲೇ ಉದ್ಯೋಗದಲ್ಲಿ ಉನ್ನತ ಸ್ಥಾನದಲ್ಲಿದ್ದವರಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡಲಾಗುವುದು. ಈ ತರಬೇತಿಗೆ ಸೇರಿಕೊಳ್ಳುವವರು ಕಡ್ಡಾಯವಾಗಿ ಕೆಲಸದಲ್ಲಿರಬಾರದು. ಜೊತೆಗೆ ೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ತರಬೇತಿ ಪಡೆಯಲು ಅರ್ಹರಾಗಿದ್ದಾರೆ. ಈ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://www.vmware.com/taara/ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ವಿವರಿಸಿದರು.