ವಕ್ಫ್ ಆಸ್ತಿ ಭ್ರಷ್ಟಾಚಾರ: ತನಿಖೆಗೆ ಆಗ್ರಹ
ಶುಕ್ರವಾರ, 13 ಜುಲೈ 2018 (20:16 IST)
ವಕ್ಫ್ ಇಲಾಖೆಗೆ ಸೇರಿದ ಆಸ್ತಿಯನ್ನ ಮುಸ್ಲೀಂ ಸಮುದಾಯದ ಸಾರ್ವಜನಿಕ ಕೆಲಸಗಳಿಗೆ ಮಾತ್ರ ಬಳಕೆ ಆಗಬೇಕು. ಯಾವುದೇ ಕಾರಣಕ್ಕೂ ಅದನ್ನ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶವೇ ಇದೆ. ಆದ್ರೆ ವಕ್ಫ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಾಗ ಒತ್ತುವರಿ ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆದರೂ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದಕ್ಕೆ ಆ ಸಮುದಾಯದವರಿಂದಲೇ ಆಕ್ರೋಶ ವ್ಯಕ್ತವಾಗಿದೆ.
ಚಿತ್ರದುರ್ಗದ ಎಲ್ಐಸಿ ಆಫೀಸ್ ಹಿಂಭಾಗದಲ್ಲಿ ಹಲವು ದಶಕಗಳ ಹಿಂದೆಯೇ ವಕ್ಫ್ ಇಲಾಖೆಗೆ ಸೇರಿದ ಸುಮಾರು 8 ಎಕರೆ ಅತಿ ಹೆಚ್ಚು ಬೆಲೆಬಾಳುವ ಜಮೀನಿದೆ. ಆದ್ರೆ ಈ ಜಾಗದಲ್ಲಿ 50 ವರ್ಷಗಳ ಹಿಂದೆ 1.7ಎಕರೆಯಷ್ಟು ಜಾಗವನ್ನ ನಗರಸಭೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರದಿಂದ ದಶಕಗಳ ಹಿಂದೆಯೇ ಪರಿಹಾರ ಹಣವನ್ನು ಮಂಜೂರು ಮಾಡಿದೆ. ಆದ್ರೆ ಇಲ್ಲಿನ ಅಧಿಕಾರಿಗಳು ಮಾತ್ರ ಮಂಜೂರಾಗಿರೋ ಪರಿಹಾರವನ್ನ ವಕ್ಫ್ ಮಂಡಳಿಗೆ ತೆಗೆದುಕೊಳ್ಳಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೆ ಇಲಾಖೆಗೆ ಸೇರಿದ ಆ ಜಾಗಕ್ಕೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಸಿಗ್ತಿರೋದ್ರಿಂದ ಖಾಸಗಿ ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಸುಮಾರು 50*70ಅಡಿಯಷ್ಟು ನಿವೇಶನವನ್ನ ನಗರಸಭೆಯಲ್ಲಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರೋ ಆರೋಪ ಕೇಳಿ ಬಂದಿದೆ.
ವಾಸ್ತವ ಅಂದ್ರೆ ಒತ್ತುವರಿಯಾಗಿರುವ ವಕ್ಫ್ ಆಸ್ತಿ ಇಲಾಖೆ ಹೆಸರಿನಲ್ಲಿಯೇ ಇದ್ದು. ಒತ್ತುವರಿ ಮಾಡಿಕೊಂಡವರಿಗೆ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿ ಆಗಿಲ್ಲ. ಈ ಕುರಿತು ನಗರಸಭೆ ಅಧಿಕಾರಿಗಳು ನಿವೇಶನ ಒತ್ತುವರಿ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗೆ, ಮೂಲ ದಾಖಲೆ ಹಾಜರು ಪಡಿಸುವಂತೆ ನೋಟಿಸ್ ಜಾರಿ ಮಾಡಿದೆ. ಆದರೆ ವಕ್ಫ್ ಅಧಿಕಾರಿಗಳು ಅಕ್ರಮ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸದೆ, ಕೇವಲ ಒತ್ತುವರಿ ತೆರವು ಸೆಕ್ಷನ್ ಅಡಿಯಲ್ಲಿ ನ್ಯಾಯಾಲಯದಲ್ಲಿ ದಾವೆ ಹಾಕಿ ಕೈತೊಳೆದುಕೊಳ್ಳುವ ಮೂಲಕ ಒತ್ತೂವರಿ ಮಾಡಿಕೊಂಡಿರುವವರ ಜೊತೆ ಷಾಮೀಲಾಗಿದ್ದಾರೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದು, ಹಿರಿಯ ವಕೀಲರು ವಕ್ಫ್ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.